ಇಂದು ಕೇಂದ್ರ ಬಜೆಟ್: ತೆರಿಗೆ ವಿನಾಯ್ತಿ ನಿರೀಕ್ಷೆಯಲ್ಲಿ ಉದ್ಯೋಗ ವಲಯ, ಮಧ್ಯಮವರ್ಗ
ನಿರ್ಮಲಾ ಸೀತಾರಾಮನ್ | Photo Credit: PTI
ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚಿನ ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ರವಿವಾರ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ಕೇಂದ್ರ ಬಜೆಟ್ ಮೇಲೆ ಭಾರಿ ನಿರೀಕ್ಷೆ ಇರಿಸಿಕೊಂಡಿರುವ ಉದ್ಯೋಗ ವಲಯ, ಮಧ್ಯಮ ವರ್ಗದ ತೆರಿಗೆ ಪಾವತಿದಾರರು ಹೊಸ ಹಣಕಾಸು ವರ್ಷದಲ್ಲಿ ತೆರಿಗೆ ವಿನಾಯ್ತಿಯ ನಿರೀಕ್ಷೆಯಲ್ಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ನಿರ್ಮಲಾ ಸೀತಾರಾಮನ್ ಅವರು ತೆರಿಗೆ ದರ, ಹೊಸ ಸ್ತರಗಳು, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಿಸುತ್ತಾರೆಯೇ ಎಂಬ ಕುತೂಹಲ ಮಧ್ಯಮ ವರ್ಗದ ತೆರಿಗೆ ಪಾವತಿದಾರರಲ್ಲಿ ವ್ಯಾಪಕವಾಗಿ ಇದೆ. ಹೊಸ ಹಾಗೂ ಹಳೆಯ ಆದಾಯ ತೆರಿಗೆ ವ್ಯವಸ್ಥೆಯ ಭವಿಷ್ಯದ ಬಗೆಗೂ ಕುತೂಹಲವಿದ್ದು, ಹೊಸ ತೆರಿಗೆ ವ್ಯವಸ್ಥೆ ಈ ಬಾರಿ ಮತ್ತಷ್ಟು ಆಕರ್ಷಕವಾಗಿರುತ್ತದೆಯೇ ಎನ್ನುವುದನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ.
ಹೊಸ ತೆರಿಗೆ ವ್ಯವಸ್ಥೆಯಡಿ ಕಡಿಮೆ ಆದಾಯ ತೆರಿಗೆ ದರಗಳು ಹಾಗೂ ಹೆಚ್ಚು ತಾರ್ಕಿಕ ತೆರಿಗೆ ಸ್ತರಗಳಿದ್ದು, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯೂ ಅಧಿಕ. ಆದಾಗ್ಯೂ ಇದರಲ್ಲಿ ಕಡಿತ ಹಾಗೂ ವಿನಾಯ್ತಿಗಳು ಅತ್ಯಲ್ಪ. ಇದಕ್ಕೆ ಹೋಲಿಸಿದರೆ ಹಳೆ ತೆರಿಗೆ ವ್ಯವಸ್ಥೆಯಲ್ಲಿ ಕಡಿಮೆ ಆದಾಯದವರಿಗೆ ತೆರಿಗೆ ದರಗಳು ಅಧಿಕವಿದ್ದು, 10 ಲಕ್ಷ ರೂಪಾಯಿ ಆದಾಯ ವರ್ಗಕ್ಕೆ ಶೇಕಡ 30ರಷ್ಟು ತೆರಿಗೆ ಇದೆ. ಹೊಸ ವ್ಯವಸ್ಥೆಯಡಿ ಈ ಮೊತ್ತಕ್ಕೆ ತೆರಿಗೆ ವಿನಾಯ್ತಿ ಇದೆ.
ಆದರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ, 80ಡಿ, 80ಟಿಟಿಎ ಅಡಿಯಲ್ಲಿ ವಿವಿಧ ಕಡಿತಗಳು, ಗೃಹಸಾಲದ ಬಡ್ಡಿಯ ಪ್ರಯೋಜನಗಳು ಲಭ್ಯ. 2026ರ ಬಜೆಟ್ ಬಳಿಕ ಆದಾಯ ತೆರಿಗೆಯ ಭವಿಷ್ಯವೇನು ಎನ್ನುವುದನ್ನು ಕುತೂಹಲದಿಂದ ಮಧ್ಯಮ ವರ್ಗ ಕಾಯುತ್ತಿದೆ.
ಅಭಿವೃದ್ಧಿಶೀಲ ಆರ್ಥಿಕತೆಗೆ ಪ್ರಬಲ ಉಳಿತಾಯ ಸಂಸ್ಕೃತ ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ತೆರಿಗೆ ವ್ಯವಸ್ಥೆ ತೆರಿಗೆಯನ್ನು ಸರಳೀಕರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಧೀರ್ಘಾವಧಿ ಉಳಿತಾಯ ಯೋಜನೆಗಳಾದ ಇಪಿಎಫ್, ಎನ್‍ಪಿಎಸ್, ಪಿಪಿಫ್‍ಗಳಂಥ ಧೀರ್ಘಾವಧಿ ಯೋಜನೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿದುಂದಿದೆ.