Delhi | ಹೋಳಿ ಹಬ್ಬದ ದಿನ ಕ್ಲುಲ್ಲಕ ಕಾರಣಕ್ಕೆ ಯುವಕನ ಥಳಿಸಿ ಹತ್ಯೆ; ಆರೋಪಿಯ ಮನೆ ಮೇಲೆ ಬುಲ್ಡೋಝರ್ ಕಾರ್ಯಾಚರಣೆ
Photo: indianexpress.com
ಹೊಸದಿಲ್ಲಿ: ಹೋಳಿ ಹಬ್ಬದಂದು ನೀರು ತುಂಬಿದ ಬಲೂನ್ ವಿಚಾರವಾಗಿ ಉಂಟಾದ ಜಗಳದಲ್ಲಿ 26 ವರ್ಷದ ತರುಣ್ ಕುಮಾರ್ ಅವರನ್ನು ಥಳಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ಕು ದಿನಗಳ ಬಳಿಕ ಆರೋಪಿಗಳ ಪೈಕಿ ಒಬ್ಬನ ಮನೆಯನ್ನು ರವಿವಾರ ಬುಲ್ಡೋಝರ್ ಬಳಸಿ ಕೆಲ ಭಾಗಗಳನ್ನು ಕೆಡವಲಾಗಿದೆ ಎಂದು indianexpress.com ವರದಿ ಮಾಡಿದೆ.
ಉತ್ತಮ್ ನಗರದ ಜೆಜೆ ಕಾಲೋನಿಯಲ್ಲಿ ಬೆಳಿಗ್ಗೆ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು ದಿಲ್ಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಕ್ರೇನ್ ಮೂಲಕ ಭಾರೀ ಯಂತ್ರೋಪಕರಣಗಳನ್ನು ಸ್ಥಳಕ್ಕೆ ತಂದು ಆರೋಪಿಗಳ ಪೈಕಿ ಒಬ್ಬನಿಗೆ ಸೇರಿದ ಮೂರು ಅಂತಸ್ತಿನ ಮನೆಯ ಕೆಲವು ಭಾಗಗಳನ್ನು ಧ್ವಂಸಗೊಳಿಸಲಾಯಿತು. ನಂತರ ಕಾರ್ಮಿಕರನ್ನು ಕರೆಸಿ ಸುತ್ತಿಗೆಯಿಂದ ಗೋಡೆಗಳನ್ನೂ ಒಡೆದು ಹಾಕಲಾಯಿತು.
ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪ್ರದೇಶದಾದ್ಯಂತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕ್ಷಿಪ್ರ ಕಾರ್ಯಪಡೆ (RAF) ಯ ಅರೆಸೈನಿಕ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು.
“ಸ್ಥಳದಲ್ಲಿರುವ ಅಕ್ರಮ ನಿರ್ಮಾಣವನ್ನು ತೆರವುಗೊಳಿಸಲು ಸ್ಥಳೀಯ ಸಂಸ್ಥೆಯೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳಲಾಗುತ್ತಿದೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದು, ಒಬ್ಬ ಬಾಲಾಪರಾಧಿಯನ್ನು ವಶಕ್ಕೆ ಪಡೆದಿದ್ದಾರೆ. ಹಲ್ಲೆಯ ವೇಳೆ ಜಾತಿ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣವೂ ದಾಖಲಿಸಲಾಗಿದೆ.
ಬಂಧಿತರನ್ನು ಉಮರ್ದೀನ್ (49), ಜುಮ್ಮದೀನ್ (36), ಕಮ್ರುದ್ದೀನ್ (36), ಮುಸ್ತಾಕ್ (46), ಮುಝಾಫರ್ (25) ಮತ್ತು ತಾಹಿರ್ (18) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಜೆಜೆ ಕಾಲೋನಿಯ ‘ಎ’ ಬ್ಲಾಕ್ ನಲ್ಲಿ ವಾಸಿಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಮಾರ್ಚ್ 4ರಂದು ತರುಣ್ ಅವರ 11 ವರ್ಷದ ಸೋದರಸಂಬಂಧಿ ತಮ್ಮ ಮನೆಯ ಮೂರನೇ ಮಹಡಿಯಲ್ಲಿ ನೀರಿನ ಬಲೂನ್ನೊಂದಿಗೆ ಆಟವಾಡುತ್ತಿದ್ದಾಗ ಘಟನೆ ಆರಂಭಗೊಂಡಿತು. ಆಕೆಯ ಕೈಯಿಂದ ಬಲೂನ್ ಜಾರಿ ಕೆಳಗೆ ಬಿದ್ದು ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಮಹಿಳೆಯ ಮೇಲೆ ನೀರು ಚಿಮ್ಮಿತು. ಇದರಿಂದ ತರುಣ್ ಅವರ ಕುಟುಂಬ ಮತ್ತು ಮಹಿಳೆಯ ಕುಟುಂಬದ ನಡುವೆ ವಾಗ್ವಾದ ಉಂಟಾಯಿತು.
ಈ ವಾಗ್ವಾದ ಶೀಘ್ರದಲ್ಲೇ ಗಲಾಟೆಗೆ ತಿರುಗಿ, ತರುಣ್ ಅವರನ್ನು ಅವರ ಮನೆಯ ಹೊರಗೆ ಕೋಲುಗಳು, ಕಬ್ಬಿಣದ ರಾಡ್ಗಳು, ಬ್ಯಾಟ್ ಮತ್ತು ಕಲ್ಲಿನ ಚಪ್ಪಡಿಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆ ನಡೆದ ನಂತರ ಆರೋಪಿಗಳ ಕುಟುಂಬದವರು ತಮ್ಮ ಮನೆಗಳನ್ನು ಬಿಟ್ಟು ಹೊರಗೆ ಹೋಗಿ ಗೇಟ್ ಗಳಿಗೆ ಬೀಗ ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದ ಹಿನ್ನೆಲೆ, ಶುಕ್ರವಾರ ರಾತ್ರಿ ಆರೋಪಿಗಳ ಮನೆಯ ಹೊರಗೆ ನಿಲ್ಲಿಸಿದ್ದ ಕೆಲವು ವಾಹನಗಳಿಗೆ ಜನರು ಬೆಂಕಿ ಹಚ್ಚಿರುವುದಾಗಿ ಆರೋಪಿಸಲಾಗಿದೆ. ಈ ಘಟನೆಯ ಕುರಿತೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.