×
Ad

2024 ರ ಲೋಕಸಭಾ ಚುನಾವಣೆಯ ಸಿಸಿಟಿವಿ ದೃಶ್ಯಾವಳಿಗಳು ದಿಲ್ಲಿಯಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳ ಬಳಿ ಇಲ್ಲ, ನಾಶವಾಗಿವೆ: ಹೈಕೋರ್ಟ್‌ಗೆ ತಿಳಿಸಿದ ಚುನಾವಣಾ ಆಯೋಗ

Update: 2025-11-13 13:11 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: 2024ರ ಲೋಕಸಭಾ ಚುನಾವಣೆಯ ವೇಳೆ ದಾಖಲಾಗಿದ್ದ ಸಿಸಿಟಿವಿ ಹಾಗೂ ವೀಡಿಯೊ ದೃಶ್ಯಾವಳಿಗಳು ದಿಲ್ಲಿಯ ಜಿಲ್ಲಾ ಚುನಾವಣಾ ಅಧಿಕಾರಿಗಳ ಬಳಿಯಿಲ್ಲ. ಅವನ್ನು ಈಗಾಗಲೇ ನಾಶಪಡಿಸಲಾಗಿದೆ ಎಂದು ಭಾರತ ಚುನಾವಣಾ ಆಯೋಗ ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದೆ.

ವೀಡಿಯೊ ದೃಶ್ಯಾವಳಿಗಳನ್ನು ಸಂರಕ್ಷಿಸುವಂತೆ ಸೂಚನೆ ನೀಡುವಂತೆ ವಕೀಲ ಮೆಹಮೂದ್ ಪ್ರಾಚಾ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರು ಭಾರತೀಯ ಚುನಾವಣಾ ಆಯೋಗದ ಹೇಳಿಕೆಯನ್ನು ದಾಖಲಿಸಿಕೊಂಡರು.

ಪ್ರಾಚಾ ಅವರು, 2024ರ ಚುನಾವಣಾ ಪ್ರಕ್ರಿಯೆಯ ಭಾಗವಾಗಿ ದೇಶದಾದ್ಯಂತದ ಮತಗಟ್ಟೆಗಳಲ್ಲಿ ನಡೆದ ವೀಡಿಯೊಗ್ರಫಿ ಮತ್ತು ಛಾಯಾಗ್ರಹಣದ ಸಂಪೂರ್ಣ ದತ್ತಾಂಶವನ್ನು ಭಾರತೀಯ ಚುನಾವಣಾ ಆಯೋಗವು ಸಂಗ್ರಹಿಸಿ ಒದಗಿಸಬೇಕೆಂದು ಮನವಿ ಮಾಡಿದ್ದರು. ಎಣಿಕೆ ಪ್ರಕ್ರಿಯೆ ಮುಗಿದು ಇವಿಎಂ–ವಿವಿಪ್ಯಾಟ್ ಯಂತ್ರಗಳನ್ನು ಗೋದಾಮುಗಳಿಗೆ ಸಾಗಿಸಿ ಸೀಲ್ ಮಾಡುವವರೆಗಿನ ಹಂತವೂ ದೃಶ್ಯಗಳಲ್ಲಿ ಒಳಗೊಂಡಿರಬೇಕು ಎಂದು ಅವರು ನ್ಯಾಯಾಲಯವನ್ನು ಕೋರಿದರು.

ದಿಲ್ಲಿಯ ಜಿಲ್ಲಾ ಚುನಾವಣಾ ಅಧಿಕಾರಿಗಳ ಬಳಿ ಇರುವ ದೃಶ್ಯಾವಳಿಗಳನ್ನು ವಿಚಾರಣೆಯ ಅವಧಿಯಲ್ಲಿ ನಾಶಪಡಿಸಬಾರದು ಎಂದು ಅವರು ಅರ್ಜಿಯಲ್ಲಿ ಕೋರಿಕೊಂಡಿದ್ದರು. “ರಿಟರ್ನಿಂಗ್ ಆಫೀಸರ್‌ ಗಾಗಿನ ಕೈಪಿಡಿ–2023” ಅನ್ನು ಉಲ್ಲೇಖಿಸಿದ ಪ್ರಾಚಾ ಅವರು, ಎಲ್ಲ ಸಿಸಿಟಿವಿ ಅಥವಾ ವೀಡಿಯೊ ದಾಖಲೆಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳು ಸುರಕ್ಷಿತವಾಗಿ ಸಂಗ್ರಹಿಸಬೇಕೆಂದು ಅದರಲ್ಲಿ ಸ್ಪಷ್ಟ ನಿರ್ದೇಶನಗಳಿವೆ ಎಂದು ಉಲ್ಲೇಖಿಸಿದ್ದರು.

ಮತ್ತೊಂದೆಡೆ, ಚುನಾವಣಾ ಆಯೋಗದ ಪರ ವಕೀಲರು ಮೇ 30ರಂದು ಹೊರಡಿಸಿದ ಹೊಸ ಸೂಚನೆಗಳನ್ನು ಉಲ್ಲೇಖಿಸಿ, ವೆಬ್‌ಕಾಸ್ಟಿಂಗ್ ಮತ್ತು ಛಾಯಾಗ್ರಹಣದ ದಾಖಲೆಗಳು ಸೀಮಿತ ಅವಧಿಗೆ ಮಾತ್ರ ಸಂರಕ್ಷಿಸಬೇಕು ಎಂಬ ತಿದ್ದುಪಡಿ ಮಾಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

“2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಸಿಸಿಟಿವಿ ಹಾಗೂ ವೀಡಿಯೊ ದೃಶ್ಯಾವಳಿಗಳು ಜಿಲ್ಲಾ ಚುನಾವಣಾ ಅಧಿಕಾರಿಗಳ ವಶದಲ್ಲಿಲ್ಲ, ಅವನ್ನು ಈಗಾಗಲೇ ನಾಶಪಡಿಸಲಾಗಿದೆ” ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಚುನಾವಣಾ ಆಯೋಗದ ಸಲ್ಲಿಕೆಯನ್ನು ಪ್ರಾಚಾ ಪ್ರಶ್ನಿಸಿದ್ದು, ತಮ್ಮ ಅರ್ಜಿಯನ್ನು ದುರ್ಬಲಗೊಳಿಸಲು ಮತ್ತು ಸಾಕ್ಷ್ಯವನ್ನು ನಾಶಪಡಿಸಲು ಮಾತ್ರ ಹೊಸ ಸೂಚನೆ ಹೊರಡಿಸಲಾಗಿದೆ ಎಂದು ಅವರು ಆರೋಪಿಸಿದರು. ಈ ಆರೋಪವನ್ನು ಚುನಾವಣಾ ಆಯೋಗದ ಪರ ವಕೀಲರು ತಿರಸ್ಕರಿಸಿದರು.

ಹೊಸ ಸೂಚನೆಗಳನ್ನು ಅರ್ಜಿಯಲ್ಲಿ ಪ್ರಶ್ನಿಸದಿರುವುದನ್ನು ಗಮನಿಸಿದ ನ್ಯಾಯಾಲಯ, ಪ್ರಸ್ತುತ ಹಂತದಲ್ಲಿ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ತಳ್ಳಿ ಹಾಕಿತು.

ಮುಖ್ಯ ಅರ್ಜಿಯ ವಿಚಾರಣೆ ಫೆಬ್ರವರಿ 13, 2026ಕ್ಕೆ ನಿಗದಿಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News