×
Ad

ರೈತರಿಂದ ‘ಕರಾಳ ಶುಕ್ರವಾರ’ ಆಚರಣೆ: ಫೆ.26ರಂದು ದೇಶಾದ್ಯಂತ ಟ್ರ್ಯಾಕ್ಟರ್ ಜಾಥಾ

Update: 2024-02-23 22:15 IST

Photo: PTI 

ಹೊಸದಿಲ್ಲಿ : ಪಂಜಾಬ್-ಹರ್ಯಾಣ ಖನೌರಿ ಗಡಿಯಲ್ಲಿ ಯುವರೈತ ಶುಭಕರಣ್‌ ಸಿಂಗ್ (21) ಸಾವನ್ನು ಪ್ರತಿಭಟಿಸಿ ರೈತರು ಇಂದು ‘ಕರಾಳ ಶುಕ್ರವಾರ ’ವನ್ನು ಆಚರಿಸಿದರು.

ರೈತರು ತಮ್ಮ ಬೇಡಿಕೆಗಳಿಗೆ ಒತ್ತು ನೀಡಲು ಫೆ.26ರಂದು ದೇಶಾದ್ಯಂತ ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್ ಜಾಥಾಗಳನ್ನು ನಡೆಸಲಿದ್ದಾರೆ ಮತ್ತು ಮಾ.14ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಅಖಿಲ ಭಾರತ ಕಿಸಾನ್‌ ಮಜ್ದೂರ್ ಮಹಾಪಂಚಾಯತ್ ನಡೆಯಲಿದೆ ಎಂದು ಭಾರತೀಯ ಕಿಸಾನ್‌ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ತಿಳಿಸಿದರು.

ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್ಕೆಎಂ) ನೇತೃತ್ವದಲ್ಲಿ ರೈತರು ಕೇಂದ್ರ ಗೃಹಸಚಿವ ಅಮಿತ್ ಶಾ, ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ರಾಜ್ಯ ಗೃಹಸಚಿವ ಅನಿಲ್ ವಿಜ್ ಅವರ ಪ್ರತಿಕೃತಿಗಳನ್ನೂ ಸುಟ್ಟುಹಾಕಿದರು.

ಪ್ರತಿಭಟನಾನಿರತ ಶುಭಕರಣ್‌ ಸಿಂಗ್ ‘ಹತ್ಯೆ ’ಗಾಗಿ ಹರ್ಯಾಣ ಮುಖ್ಯಮಂತ್ರಿ ಗೃಹಸಚಿವರ ವಿರುದ್ಧ ಪ್ರಕರಣವನ್ನು ದಾಖಲಿಸಬೇಕು ಎಂದೂ ಎಸ್ಕೆಎಂ ಆಗ್ರಹಿಸಿದೆ.

2020-21ರಲ್ಲಿ ಈಗ ರದ್ದುಗೊಂಡಿರುವ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಸುದೀರ್ಘ ಪ್ರತಿಭಟನೆಯನ್ನು ಮುನ್ನಡೆಸಿದ್ದ ಎಸ್ಕೆಎಂ ಹಾಲಿ ನಡೆಯುತ್ತಿರುವ ‘ದಿಲ್ಲಿ ಚಲೋ’ ಜಾಥಾದಿಂದ ದೂರವುಳಿದಿದೆಯಾದರೂ ಅದಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದೆ. ದಿಲ್ಲಿ ಚಲೋ ಆಂದೋಲನದಲ್ಲಿ ಭಾಗಿಯಾಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಎಸ್ಕೆಎಂ ನಾಯಕರು ತಾವು ಸ್ವತಂತ್ರವಾಗಿ ಪ್ರತಿಭಟನೆ ನಡೆಸುವುದಾಗಿ ಉತ್ತರಿಸಿದರು.

‘ಮಾ.14ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರೈತರು ಟ್ರ್ಯಾಕ್ಟರ್ಗಳೊಂದಿಗೆ ಹೋಗುವುದಿಲ್ಲ. ಸರಕಾರವು ನಮ್ಮನ್ನು ತಡೆಯುವುದಿಲ್ಲ ಎಂದು ಹೇಳುತ್ತಿದೆ. ಅದೇನು ಮಾಡಲಿದೆ ಎನ್ನುವುದನ್ನು ನೋಡೋಣ ’ ಎಂದು ಟಿಕಾಯತ್ ಹೇಳಿದರು.

ಪಂಜಾಬ್ ಸರಕಾರವು ಶುಭಕರಣ್‌ ಸಿಂಗ್ ನನ್ನು ಹುತಾತ್ಮನೆಂದು ಘೋಷಿಸಬೇಕು ಎಂದು ಆಗ್ರಹಿಸಿರುವ ರೈತ ನಾಯಕರು, ಸರಕಾರವು ಕೊಲೆ ಪ್ರಕರಣವನ್ನು ದಾಖಲಿಸುವವರೆಗೆ ಸಿಂಗ್ ಅಂತ್ಯಸಂಸ್ಕಾರ ನಡೆಯುವುದಿಲ್ಲ ಎಂದು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News