“ಮಹಿಳೆಯ ಘನತೆಗೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ”: ವೈದ್ಯೆಯ ಹಿಜಾಬ್ ಎಳೆದ ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ನಾಯಕಿ ಆಕ್ರೋಶ
"ನಿತೀಶ್ ಕುಮಾರ್ ಮತ್ತು ಸಂಜಯ್ ನಿಶಾದ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು"
ಅಪರ್ಣಾ ಯಾದವ್ (Screengrab: X/@PTI_News)
ಹೊಸದಿಲ್ಲಿ: ಪಾಟ್ನಾದಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಸ್ಲಿಂ ವೈದ್ಯೆಯ ಹಿಜಾಬ್ ಅನ್ನು ತೆಗೆದ ಘಟನೆಯನ್ನು ಉತ್ತರ ಪ್ರದೇಶದ ಬಿಜೆಪಿ ನಾಯಕಿಯೊಬ್ಬರು ಟೀಕಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗದ ಉಪಾಧ್ಯಕ್ಷೆ ಆಗಿರುವ ಅಪರ್ಣಾ ಯಾದವ್ ಈ ಕುರಿತು ಪ್ರತಿಕ್ರಿಯಿಸಿ, ಯಾವುದೇ ಮಹಿಳೆಯ ಘನತೆಗೆ ಧಕ್ಕೆ ತರುವ ಹಕ್ಕು ಅಥವಾ ಆಕೆಯ ಧರ್ಮ ಅಥವಾ ಜಾತಿಗೆ ಸಂಬಂಧಿಸಿದ ಕೀಳು ಮಟ್ಟದ ಹೇಳಿಕೆ ನೀಡುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.
ಮಂಗಳವಾರ ಬಾರಾಬಂಕಿ ಜಿಲ್ಲಾ ಮಹಿಳಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅಪರ್ಣಾ ಯಾದವ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಡೆ ಮತ್ತು ಬಿಹಾರ ಸಿಎಂ ಅವರ ಕೃತ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ ಉತ್ತರ ಪ್ರದೇಶ ಸಚಿವ ಸಂಜಯ್ ನಿಷಾದ್ ಅವರ ನಡೆಯೂ ತಪ್ಪು ಎಂದು ಹೇಳಿದ್ದಾರೆ.
"ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ತಮ್ಮ ನಡವಳಿಕೆ ಮತ್ತು ಭಾಷೆಯ ಬಗ್ಗೆ ಎಚ್ಚರ ವಹಿಸಬೇಕು. ಅವರ ಕೃತ್ಯಗಳು ಸಮಾಜದ ಮೇಲೆ ವಿಶೇಷವಾಗಿ ಮಹಿಳೆಯರ ಮೇಲೆ ಪ್ರಭಾವ ಬೀರುತ್ತವೆ" ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ಮತ್ತು ಸಂಜಯ್ ನಿಶಾದ್ ಈ ಬಗ್ಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ ಅಪರ್ಣಾ ಯಾದವ್, ಮಹಿಳೆಯ ಘನತೆಗೆ ಧಕ್ಕೆಯಾದಾಗ ಕ್ಷಮಿಸಲು ಸಾಧ್ಯವಿಲ್ಲ. ಇದನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿದರು.