×
Ad

ಹರ್ಯಾಣ | ಹೋಟೆಲ್ ನಲ್ಲಿ ಮಹಿಳಾ ಶೂಟರ್ ಮೇಲೆ ಅತ್ಯಾಚಾರ; ಮೂವರು ಆರೋಪಿಗಳ ಬಂಧನ

Update: 2025-12-19 15:32 IST

ಸಾಂದರ್ಭಿಕ ಚಿತ್ರ

ಫರೀದಾಬಾದ್ (ಹರ್ಯಾಣ): ಹೋಟೆಲ್ ನಲ್ಲಿ ಉಳಿದುಕೊಂಡಿದ್ದ 23 ವರ್ಷದ ಮಹಿಳಾ ಶೂಟರ್ ಒಬ್ಬರ ಮೇಲೆ ಅತ್ಯಾಚಾರ ನಡೆದಿದೆ ಎಂದು ವರದಿಯಾಗಿದೆ. ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ಬಂದಿದ್ದ ಅವರು ಹೋಟೆಲ್ ಒಂದರಲ್ಲಿ ತಂಗಿದ್ದರು ಎನ್ನಲಾಗಿದೆ. ಈ ಸಂಬಂಧ ಮಹಿಳಾ ಶೂಟರ್ ನ ಸ್ನೇಹಿತ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಸಂಜೆ ತನ್ನ ಮೇಲೆ ಅತ್ಯಾಚಾರ ನಡೆದ ನಂತರ, ಆರೋಪಿಗಳನ್ನು ಹೋಟೆಲ್ ಕೊಠಡಿಯಲ್ಲಿ ಕೂಡಿ ಹಾಕುವಲ್ಲಿ ಯಶಸ್ವಿಯಾಗಿರುವ ಸಂತ್ರಸ್ತ ಮಹಿಳಾ ಶೂಟರ್, ನಂತರ ಅತ್ಯಾಚಾರದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆಕೆಯ ದೂರನ್ನು ಆಧರಿಸಿ ಸರಾಯಿ ಖ್ವಾಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು, ಆರೋಪಿಗಳಾದ ಸತೇಂದ್ರ, ಗೌರವ್ ಮತ್ತು ಮಹಿಳಾ ಶೂಟರ್ ನ ಸ್ನೇಹಿತನನ್ನು  ಬಂಧಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.

ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ಮಹಿಳಾ ಶೂಟರ್ ತನ್ನ ಸ್ನೇಹಿತನೊಂದಿಗೆ ಮಂಗಳವಾರ ಫರೀದಾಬಾದ್ ಗೆ ಆಗಮಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸ್ಪರ್ಧೆ ಮುಕ್ತಾಯಗೊಂಡ ನಂತರ, ಬುಧವಾರ ಸಂಜೆ ಮಹಿಳಾ ಶೂಟರ್ ನ ಸ್ನೇಹಿತ ಫರೀದಾಬಾದ್ ನಲ್ಲಿ ವಾಸಿಸುತ್ತಿರುವ ತನ್ನ ಪರಿಚಿತನಾದ ಗೌರವ್ ಎಂಬ ವ್ಯಕ್ತಿಗೆ ಆಕೆಯನ್ನು ಮೆಟ್ರೊ ನಿಲ್ದಾಣಕ್ಕೆ ಬಿಡುವಂತೆ ಸೂಚಿಸಿದ್ದಾನೆ.

ಸತೇಂದ್ರ ಎಂಬ ಸ್ನೇಹಿತನೊಂದಿಗೆ ಗೌರವ್ ಅಲ್ಲಿಗೆ ಬಂದಿದ್ದು, ಅಂದು ಫರೀದಾಬಾದ್ ನಲ್ಲೇ ಉಳಿದುಕೊಂಡು, ಮರುದಿನ ಅಲ್ಲಿಂದ ತೆರಳಲು ನಾಲ್ವರೂ ನಿರ್ಧರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ, ಎರಡು ಕೊಠಡಿಗಳನ್ನು ಕಾಯ್ದರಿಸಿರುವ ಅವರು, ಒಂದು ಕೊಠಡಿಯಲ್ಲಿ ಜೊತೆಯಾಗಿ ಔತಣ ಕೂಟ ನಡೆಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

ರಾತ್ರಿ ಸುಮಾರು 9 ಗಂಟೆಗೆ ನನ್ನ ಸ್ನೇಹಿತ ತನ್ನ ಪರಿಚಿತ ಗೌರವ್ ನೊಂದಿಗೆ ಕೊಠಡಿಯಿಂದ ಕೆಳಗಿಳಿದು ಹೋದಾಗ, ಕೊಠಡಿಯಲ್ಲಿದ್ದ ಸತೇಂದ್ರ ನನ್ನ ಮೇಲೆ ಅತ್ಯಾಚಾರವೆಸಗಿದ ಎಂದು ದೂರುದಾರ ಸಂತ್ರಸ್ತೆ ಆರೋಪಿಸಿದ್ದಾರೆ.

ನನ್ನ ಸ್ನೇಹಿತನು ತನ್ನ ಪರಿಚಿತ ಗೌರವ್ ನೊಂದಿಗೆ ಕೊಠಡಿಗೆ ಮರಳಿದಾಗ, ಘಟನೆಯ ಕುರಿತು ಅವರಿಗೆ ಮಾಹಿತಿ ನೀಡಿದೆ ಹಾಗೂ ಆರೋಪಿಗಳನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಪೊಲೀಸರನ್ನು ಸಂಪರ್ಕಿಸಿದೆ ಎಂದು ಆಕೆ ಹೇಳಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಹೋಟೆಲ್ ಗೆ ಧಾವಿಸಿದ ಪೊಲೀಸ್ ತಂಡ, ಮೂವರೂ ಆರೋಪಿಗಳನ್ನು ಬಂಧಿಸಿದೆ. ಬಳಿಕ ಅವರನ್ನು ನಗರ ನ್ಯಾಯಾಲಯವೊಂದರೆದುರು ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ ಎಂದು ಠಾಣಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News