1xBet ಬೆಟ್ಟಿಂಗ್ ಆ್ಯಪ್ ಪ್ರಕರಣ: ಯುವರಾಜ್ ಸಿಂಗ್, ಸೋನು ಸೂದ್ ಮತ್ತಿತರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ED
ಯುವರಾಜ್ ಸಿಂಗ್ | Photo Credit : PTI
ಹೊಸದಿಲ್ಲಿ: 1xBet ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಭಾರತೀಯ ಆಟಗಾರ ಯುವರಾಜ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ ಹಾಗೂ ಊರ್ವಶಿ ರೌಟೇಲಾ, ಸೋನು ಸೂದ್ ಸೇರಿದಂತೆ ಒಟ್ಟು ಐದು ಮಂದಿ ನಟರ ಸ್ಥಿರಾಸ್ತಿಗಳನ್ನು ಶುಕ್ರವಾರ ಜಾರಿ ನಿರ್ದೇಶನಾಲಯ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು ತಾತ್ಕಾಲಿಕ ಮುಟ್ಟುಗೋಲು ಆದೇಶವನ್ನು ಹೊರಡಿಸಿದ ನಂತರ, ನಟಿ ನೇಹಾ ಶರ್ಮ, ರೂಪದರ್ಶಿ ಊರ್ವಶಿ ರೌತೇಲಾ ತಾಯಿ ಹಾಗೂ ಬಂಗಾಳಿ ನಟಿ ಅಂಕುಶ್ ಹಝ್ರಾ ಮತ್ತು ಮಿಮಿ ಚಕ್ರವರ್ತಿ ಅವರ ಸ್ಥಿರಾಸ್ತಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮಿಮಿ ಚಕ್ರವರ್ತಿ ಮಾಜಿ ಸಂಸದರೂ ಆಗಿದ್ದಾರೆ.
ಜಾರಿ ನಿರ್ದೇಶನಾಲಯದ ಪ್ರಕಾರ, ಈ ಸೆಲೆಬ್ರಿಟಿಗಳು ತಿಳಿದೇ 1xBet ಬೆಟ್ಟಿಂಗ್ ಆ್ಯಪ್ ಅನ್ನು ಪ್ರಚಾರ ಮಾಡಲು ವಿದೇಶಿ ಸಂಸ್ಥೆಗಳ ಸೋಗುದಾರ ಪ್ರತಿನಿಧಿಗಳ ಮೂಲಕ ಒಪ್ಪಂದ ಮಾಡಿಕೊಂಡಿದ್ದರು. ಅಕ್ರಮ ಹಣದ ಮೂಲವನ್ನು ಮುಚ್ಚಿಡಲು ವಿದೇಶಿ ಸಂಸ್ಥೆಗಳ ಮೂಲಕ ಪಾವತಿಯಾದ ಹಣಕ್ಕೆ ಬದಲಿಯಾಗಿ ಈ ಪ್ರಚಾರವನ್ನು ಮಾಡಲಾಗಿದ್ದು, ಇದು ಅಕ್ರಮ ಬೆಟ್ಟಿಂಗ್ ಚಟುವಟಿಕೆಗಳಿಂದ ಉದ್ಭವವಾಗಿರುವ ಅಪರಾಧ ಪ್ರಕ್ರಿಯೆಯೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗಿದೆ.
1xBet ಬೆಟ್ಟಿಂಗ್ ಆ್ಯಪ್ ಭಾರತದಲ್ಲಿ ಅಧಿಕೃತ ಮಾನ್ಯತೆ ಇಲ್ಲದೆ ತನ್ನ ಪ್ರಚಾರ ನಡೆಸಿದೆ ಹಾಗೂ ಸಾಮಾಜಿಕ ಮಾಧ್ಯಮ, ಆನ್ ಲೈನ್ ವಿಡಿಯೊಗಳು ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಮರೆಮಾಚಿದ ಬ್ರಾಂಡಿಂಗ್ ಮತ್ತು ಜಾಹೀರಾತುಗಳ ಮೂಲಕ ಭಾರತೀಯ ಬಳಕೆದಾರರನ್ನು ಗುರಿಯಾಗಿಸಿಕೊಂಡಿತ್ತು ಎಂದು ಆರೋಪಿಸಲಾಗಿದೆ.