ಬೀದಿ ನಾಯಿ ಪ್ರಕರಣ | ವಿಡಿಯೋ ತೋರಿಸಿ, ಮಾನವೀಯತೆ ಎಂದರೇನು ಎಂದು ಪ್ರಶ್ನಿಸುತ್ತೇವೆ: ಸುಪ್ರೀಂ ಕೋರ್ಟ್
Photo credit: PTI
ಹೊಸದಿಲ್ಲಿ: ದಿಲ್ಲಿ ಮಹಾನಗರ ಪಾಲಿಕೆ ಕೆಲವು ನಿಯಮಗಳನ್ನು ರೂಪಿಸಿ ಬೀದಿ ನಾಯಿಗಳ ಜೊತೆ ಅಮಾನವೀಯವಾಗಿ ವರ್ತಿಸುತ್ತಿದೆ ಎಂದು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಯಲ್ಲಿ ಕೆಲವು ವೀಡಿಯೊವನ್ನು ತೋರಿಸುತ್ತೇವೆ. ಆಮೇಲೆ ಮಾನವೀಯತೆ ಎಂದರೇನು ಎಂದು ನಿಮ್ಮಲ್ಲಿ ಕೇಳುತ್ತೇವೆ ಎಂದು ಹೇಳಿದ್ದಾರೆ.
ಗುರುವಾರ ಈ ವಿಷಯದ ವಿಚಾರಣೆ ನಡೆಯಬೇಕಿತ್ತು. ಆದರೆ ಅದು ರದ್ದಾಗಿದೆ ಎಂದು ಬೀದಿ ನಾಯಿಗಳ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠಕ್ಕೆ ತಿಳಿಸಿದ್ದಾರೆ. ಈ ಬಗ್ಗೆ ಜನವರಿ 7ರಂದು ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.
ಸಮಸ್ಯಯೆಂದರೆ ದಿಲ್ಲಿ ಪಾಲಿಕೆ ಈ ಮಧ್ಯೆ, ಸಂಪೂರ್ಣವಾಗಿ ವಿರುದ್ಧವಾದ ಕೆಲವು ನಿಯಮಗಳನ್ನು ರೂಪಿಸಿದೆ. ಶುಕ್ರವಾರವೇ ಈ ಅರ್ಜಿಯ ವಿಚಾರಣೆ ನಡೆಸಿ, ಯಾಕೆಂದರೆ, ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಕಾರ್ಯವನ್ನು ಪಾಲಿಕೆ ಇದೇ ತಿಂಗಳಿನಿಂದಲೇ ನಡೆಸಲಿದೆ. ಆದರೆ, ಬೀದಿ ನಾಯಿಗಳಿಗೆ ಆಶ್ರಯ ತಾಣಗಳನ್ನೇ ನಿರ್ಮಿಸಿಲ್ಲ ಎಂದು ಕಪಿಲ್ ಸಿಬಲ್ ವಾದಿಸಿದರು.
‘ಪರವಾಗಿಲ್ಲ, ಸಿಬಲ್ ಅವರೆ, ಅವರು ಅವರ ಕೆಲಸ ಮಾಡಲಿ’ ಎಂದು ಈ ವೇಳೆ ಪೀಠ ಹೇಳಿದೆ. ಬೀದಿ ನಾಯಿಗಳಿಗೆ ಆಶ್ರಯ ತಾಣಗಳಿಲ್ಲ. ಅವುಗಳ ಮೇಲೆ ಅಮಾನವೀಯ ವರ್ತನೆ ತೋರಲಾಗುತ್ತಿದೆ ಎಂದು ಕಪಿಲ್ ಸಿಬಲ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.