ಬಾಂಗ್ಲಾದೇಶದ ಯುವ ನಾಯಕನ ಹತ್ಯೆ ಬಳಿಕ ಭುಗಿಲೆದ್ದ ಹಿಂಸಾಚಾರ; ಜುಲೈ ದಂಗೆ ನಾಯಕ ಷರೀಫ್ ಉಸ್ಮಾನ್ ಹಾದಿ ಯಾರು?
ಷರೀಫ್ ಉಸ್ಮಾನ್ ಹಾದಿ | Photo Credit : X \ @thewirepak
ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ 2024ರ ಜುಲೈನಲ್ಲಿ ನಡೆದಿದ್ದ ದಂಗೆಯಲ್ಲಿ ಮುಂಚೂಣಿಯಲ್ಲಿದ್ದ ಯುವ ನಾಯಕ ಷರೀಷ್ ಉಸ್ಮಾನ್ ಹಾದಿ ಹತ್ಯೆ ನಡೆದಿದೆ. ಇದರ ಬೆನ್ನಲ್ಲೆ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.
ಕಳೆದ ವಾರ ಢಾಕಾದ ಕೇಂದ್ರ ಬಿಜೋಯ್‌ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಉಸ್ಮಾನ್ ಅವರ ತಲೆಗೆ ಮುಸುಕುಧಾರಿಯೊಬ್ಬ ಗುಂಡಿಕ್ಕಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಅವರಿಗೆ ಸಿಂಗಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗುರುವಾರ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಷರೀಫ್ ಉಸ್ಮಾನ್ ಹಾದಿ ಯಾರು?
ಉಸ್ಮಾನ್ ಹಾದಿ ದಕ್ಷಿಣ ಬಾಂಗ್ಲಾದೇಶದ ಜಲಕಥಿ ಜಿಲ್ಲೆಯ ನಲ್ಚಿಟಿಯ ನಿವಾಸಿ. ಅವರ ತಂದೆ ಮದರಸಾ ಶಿಕ್ಷಕರಾಗಿದ್ದರು.
ನೆಸರಬಾದ್ ಕಾಮಿಲ್ ಮದರಸಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಉಸ್ಮಾನ್, ನಂತರ ಢಾಕಾ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಅಧ್ಯಯನ ನಡೆಸಿದ್ದರು. ಆ ಬಳಿಕ ಸ್ಕಾಲರ್ಸ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ಕ್ರಾಂತಿ ವೇಳೆ ಹಾದಿ ʼಇಂಕ್ವಿಲಾಬ್ ಮಂಚ್ʼ ಎಂಬ 'ಸಾಮಾಜಿಕ-ಸಾಂಸ್ಕೃತಿಕ ವೇದಿಕೆ'ಯನ್ನು ಸ್ಥಾಪಿಸಿದ್ದರು. ಇದು 2024ರ ಜುಲೈ ಕ್ರಾಂತಿಯ ನಂತರ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು.
ಬಾಂಗ್ಲಾದಲ್ಲಿ ಅಸ್ತಿತ್ವದಲ್ಲಿದ್ದ ಶೇಖ್ ಹಸೀನಾ ಸರಕಾರ ಮತ್ತು ಭಾರತವನ್ನು ತೀವ್ರವಾಗಿ ಟೀಕಿಸುತ್ತಿದ್ದ ಉಸ್ಮಾನ್ ಅವರು, ಹಸೀನಾ ಅವರ ಅವಾಮಿ ಲೀಗ್ ಅನ್ನು ನಿಷೇಧಿಸುವಂತೆ ಆಗ್ರಹಿಸಿದ್ದರು. ಅವರ ಹೋರಾಟದ ಫಲವಾಗಿ, 'ಇಂಕ್ವಿಲಾಬ್ ಮಂಚ್' ಪ್ರಬಲ ರಾಜಕೀಯ ಗುಂಪಾಗಿ ಮುನ್ನಲೆಗೆ ಬಂದಿತ್ತು.
ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ 'ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ' ಹಸೀನಾ ಅವರಿಗೆ ಮರಣದಂಡನೆ ವಿಧಿಸಿರುವುದನ್ನುಉಸ್ಮಾನ್ ಹಾದಿ ಸ್ವಾಗತಿಸಿದ್ದರು. ಈ ತೀರ್ಪು ಇಡೀ ಜಗತ್ತಿಗೆ ಮಾದರಿ ಎಂದು ಹೇಳಿದ್ದರು. ಹಾದಿ ಬಾಂಗ್ಲಾದೇಶ ಸೇನೆ ಹಾಗೂ ಯೂನಸ್ ನೇತೃತ್ವದ ಮಧ್ಯಂತರ ಸರಕಾರವನ್ನು ಕೂಡ ಟೀಕಿಸುತ್ತಿದ್ದರು.
ಹಾದಿಯ ನಿಧನದ ಬಳಿಕ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಾದಿಯ ಹತ್ಯೆ ಆರೋಪಿಗಳು ಭಾರತಕ್ಕೆ ಪಲಾಯನ ಗೈದಿದ್ದಾರೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಹಂತಕರನ್ನು ವಶಕ್ಕೆ ಪಡೆಯುವವರೆಗೆ ಭಾರತದ ರಾಯಭಾರ ಕಚೇರಿಯನ್ನು ಬಂದ್ ಮಾಡಬೇಕು ಎಂದು ಹಲವರು ಮಧ್ಯಂತರ ಸರಕಾರವನ್ನು ಆಗ್ರಹಿಸಿದ್ದಾರೆ.