ಹಾನಿಕಾರಕ ಕಂಟೆಂಟ್ ನಿಯಂತ್ರಣಕ್ಕೆ ಪ್ರಸ್ತುತ ನಿಬಂಧನೆಗಳು,ಹೊಸ ಕಾನೂನು ಚೌಕಟ್ಟಿನ ಅಗತ್ಯವನ್ನು ಪರಿಶೀಲಿಸಲಾಗುತ್ತಿದೆ: ಕೇಂದ್ರ ಸರಕಾರ
ರಣವೀರ ಅಲಹಾಬಾದಿಯಾ | PC : Ranveer Allahbadia/Instagram
ಹೊಸದಿಲ್ಲಿ: ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲತೆ ಮತ್ತು ಹಿಂಸೆಯನ್ನು ತೋರಿಸಲಾಗುತ್ತಿದೆ ಎಂಬ ದೂರುಗಳ ನಡುವೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಹಾನಿಕಾರಕ ಕಂಟೆಂಟ್‌ಗಳನ್ನು ನಿಯಂತ್ರಿಸಲು ಪ್ರಸ್ತುತ ಶಾಸನಬದ್ಧ ನಿಬಂಧನೆಗಳನ್ನು ಮತ್ತು ಹೊಸ ಕಾನೂನು ಚೌಕಟ್ಟಿನ ಅಗತ್ಯವನ್ನು ಪರಿಶೀಲಿಸುತ್ತಿದೆ.
ಡಿಜಿಟಲ್ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ ಮತ್ತು ಹಿಂಸಾತ್ಮಕ ಕಂಟೆಂಟ್‌ಗಳನ್ನು ತೋರಿಸಲು ಅಭಿವ್ಯಕ್ತಿ ಸ್ಯಾತಂತ್ರ್ಯದ ಸಾಂವಿಧಾನಿಕ ಹಕ್ಕನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಕಳವಳವು ಸಮಾಜದಲ್ಲಿ ಹೆಚ್ಚುತ್ತಿದೆ ಎಂದು ಸಚಿವಾಲಯವು ಬಿಜೆಪಿ ಸಂಸದ ನಿಶಿಕಾಂತ ದುಬೆ ನೇತೃತ್ವದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿಗೆ ನೀಡಿರುವ ಉತ್ತರದಲ್ಲಿ ತಿಳಿಸಿದೆ.
ಪ್ರಚಲಿತ ಕಾನೂನುಗಳಡಿ ಕೆಲವು ನಿಬಂಧನೆಗಳು ಅಸ್ತಿತ್ವದಲ್ಲಿದ್ದರೂ ಇಂತಹ ಹಾನಿಕಾರಕ ಕಂಟೆಂಟ್‌ನ್ನು ನಿಯಂತ್ರಿಸಲು ಕಠಿಣ ಮತ್ತು ಪರಿಣಾಮಕಾರಿ ಕಾನೂನು ಚೌಕಟ್ಟಿಗಾಗಿ ಬೇಡಿಕೆಯು ಹೆಚ್ಚುತ್ತಿದೆ ಎಂದು ಸಮಿತಿಗೆ ತಿಳಿಸಿರುವ ಸಚಿವಾಲಯವು,ತಾನು ಈ ಬೆಳವಣಿಗೆಗಳನ್ನು ಗಮನಿಸಿದ್ದೇನೆ ಮತ್ತು ಪ್ರಸ್ತುತ ಶಾಸನಬದ್ಧ ನಿಬಂಧನೆಗಳನ್ನು ಮತ್ತು ಹೊಸ ಕಾನೂನು ಚೌಕಟ್ಟಿನ ಅಗತ್ಯವನ್ನು ಪರಿಶೀಲಿಸುತ್ತಿದ್ದೇನೆ ಎಂದು ಹೇಳಿದೆ.
ಸಾಮಾಜಿಕ ಮಾಧ್ಯಮ ಪ್ರಭಾವಿ ರಣವೀರ ಅಲಹಾಬಾದಿಯಾ ಅವರ ಅಸಭ್ಯ ಕಮೆಂಟ್‌ಗಳು ವ್ಯಾಪಕ ಖಂಡನೆಗೆ ಗುರಿಯಾದ ಬಳಿಕ ಸುದ್ದಿಯಲ್ಲಿರುವ ಈ ವಿಷಯದ ಬಗ್ಗೆ ಅನೇಕ ಉಚ್ಚ ನ್ಯಾಯಾಲಯಗಳು,ಸರ್ವೋಚ್ಚ ನ್ಯಾಯಾಲಯ,ಸಂಸದರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗದಂತಹ ಶಾಸನಬದ್ಧ ಸಂಸ್ಥೆಗಳು ಮಾತನಾಡಿವೆ ಎಂದೂ ಸಚಿವಾಲಯವು ತಿಳಿಸಿದೆ.
ಸರ್ವೋಚ್ಚ ನ್ಯಾಯಾಲಯವು ಅಲಹಾಬಾದಿಯಾಗೆ ಬಂಧನದ ವಿರುದ್ಧ ರಕ್ಷಣೆಯನ್ನು ನೀಡಿದೆಯಾದರೂ ಅವರ ಹೇಳಿಕೆಗಳನ್ನು ಕಟುವಾಗಿ ಟೀಕಿಸಿದೆ.
ಸೂಕ್ತ ಚರ್ಚೆಗಳ ಬಳಿಕ ವಿವರವಾದ ಟಿಪ್ಪಣಿಯನ್ನು ಸಲ್ಲಿಸುವುದಾಗಿ ಸಚಿವಾಲಯವು ಸಂಸದೀಯ ಸಮಿತಿಗೆ ತಿಳಿಸಿದೆ. ಸಮಿತಿಯ ಮುಂದಿನ ಸಭೆಯು ಫೆ.೨೫ರಂದು ನಡೆಯಲಿದೆ.
ಸಮಿತಿಯು ಫೆ.೧೩ರಂದು ನೂತನ ತಂತ್ರಜ್ಞಾನ ಮತ್ತು ಮಾಧ್ಯಮ ವೇದಿಕೆಗಳು ಹೊರಹೊಮ್ಮುತ್ತಿರುವ ಹಿನ್ನೆಲೆಯಲ್ಲಿ ವಿವಾದಾತ್ಮಕ ಕಂಟೆಂಟ್‌ಗಳಿಗೆ ಕಡಿವಾಣ ಹಾಕಲು ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ಅಗತ್ಯ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಸಚಿವಾಲಯದ ಅಭಿಪ್ರಾಯವನ್ನು ಕೇಳಿತ್ತು.
ನಿರ್ದಿಷ್ಟ ಕಾನೂನುಗಳ ವ್ಯಾಪ್ತಿಗೊಳಪಟ್ಟಿರುವ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಂದ ಭಿನ್ನವಾಗಿ ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳು ಅಥವಾ ಯೂಟ್ಯೂಬ್‌ನಂತಹ ಆನ್‌ಲೈನ್ ಮಾಧ್ಯಮ ಸೇವೆಗಳು ನಿರ್ದಿಷ್ಟ ನಿಯಂತ್ರಣ ಚೌಕಟ್ಟನ್ನು ಹೊಂದಿಲ್ಲ,ಇದು ಕಾನೂನುಗಳನ್ನು ತಿದ್ದುಪಡಿಗೊಳಿಸುವಂತೆ ಆಗ್ರಹವನ್ನು ಹುಟ್ಟುಹಾಕಿದೆ.