×
Ad

ಭಾರತದಲ್ಲಿ ಮತದಾನ ಉತ್ತೇಜನಕ್ಕೆ ಯುಎಸ್ ಏಯ್ಡ್ ನಿಂದ 21 ಮಿಲಿಯನ್ ಡಾಲರ್ ಆರ್ಥಿಕ ನೆರವು ಸ್ವೀಕರಿಸಿಲ್ಲ: ಕೇಂದ್ರ ಸ್ಪಷ್ಟನೆ

Update: 2025-08-22 22:48 IST

 ಕೀರ್ತಿ ವರ್ಧನ್ ಸಿಂಗ್ | PC : PTI 

ಹೊಸದಿಲ್ಲಿ,ಆ.22: ಭಾರತದಲ್ಲಿ ಮತದಾನವನ್ನು ಉತ್ತೇಜಿಸುವುದಕ್ಕಾಗಿ 2014-2024ರ ಅವಧಿಯವರೆಗೆ ಭಾರತವು 21 ಮಿಲಿಯ ಡಾಲರ್ಆರ್ಥಿಕ ನೆರವನ್ನು ಸ್ವೀಕರಿಸಿಲ್ಲವೆಂದು ಕೇಂದ್ರ ಸರಕಾರ ಶುಕ್ರವಾರ ತಿಳಿಸಿದೆ.

ವಿದೇಶಾಂಗ ಇಲಾಖೆಯ ಸಹಾಯಕ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ರಾಜ್ಯಸಭಾದಲ್ಲಿ ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಗುರುವಾರ ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.

‘‘ 2014ರಿಂದ 2024ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಯುಎಸ್ ಏಯ್ಡ್ ನೆರವಿನ ಹಾಗೂ ಆರ್ಥಿಕ ನಿದಿ ಪೂರೈಕೆಯ ಯೋಜನೆಗಳ ಕುರಿತ ಖರ್ಚುವೆಚ್ಚಗಳ ವಿವರಗಳನ್ನು ತುರ್ತಾಗಿ ನೀಡುವಂತೆ ವಿದೇಶಾಂಗ ಸಚಿವಾಲಯವು ಹೊಸದಿಲ್ಲಿಯಲ್ಲಿನ ಅಮೆರಿಕ ರಾಯಭಾರಿ ಕಚೇರಿಗೆ ಫೆಬ್ರವರಿ 28ರಂದು ತಿಳಿಸಿತ್ತು. ಅಲ್ಲದೆ ಇಂತಹ ಉಪಕ್ರಮಗಳನ್ನು ಕಾರ್ಯಗತಗೊಳಿಸುವ ಎನ್ಜಿಓಗಳು ಹಾಗೂ ಇತರ ಅನುಷ್ಠಾನ ಪಾಲುದಾರರ ಸಂಸ್ಥೆಗಳ ಪಟ್ಟಿಯನ್ನು ನೀಡುವಂತೆಯೂ ಅದು ಅಮೆರಿಕನ್ ರಾಯಭಾರಿ ಕಚೇರಿಯನ್ನು ಕೋರಿತ್ತು.ಜುಲೈ 2ರಂದು ಅಮೆರಿಕ ರಾಯಭಾರಿ ಕಚೇರಿಯು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು, 2014ರಿಂದ 2024ರವರೆಗೆ ಭಾರತದಲ್ಲಿ ಯುಎಸ್ಏಯ್ಡ್ ಸಂಸ್ಥೆಯ ಮೂಲಕ ಬಂದಿರುವ ನೆರವು ಪೂರೈಕೆಗಳ ವಿವರಗಳನ್ನು ನೀಡಿತ್ತು.ನೆರವುಗಳ ಅನುಷ್ಠಾನ ಪಾಲುದಾರರು, ಉದ್ದೇಶಗಳು ಹಾಗೂ ಪ್ರತಿಯೊಂದು ಚಟುವಟಿಕೆಯ ಪ್ರಮುಖ ಸಾಧನೆಗಳ ವಿವರಗಳು ಅವುಗಳಲ್ಲಿ ಒಳಗೊಂಡಿದ್ದವು ’’ಎಂದು ಸಚಿವ ಕೀರ್ತಿವರ್ಧನ್ ಸಿಂಗ್ ತಿಳಿಸಿದರು.

2014ರಿಂದ 2024ರ ನಡುವಿನ ಹಣಕಾಸು ವರ್ಷಗಳ ನಡುವೆ ಭಾರತದಲ್ಲಿ ಮತದಾನ ಉತ್ತೇಜನಕ್ಕಾಗಿ ಯುಎಸ್ಏಯ್ಡ್ ಆಗಲಿ ಅಥವಾ ಭಾರತ ಸರಕಾರವಾಗಲಿ ಹಣಕಾಸು ನೆರವನ್ನಾಗಲಿ ಪಡೆದುಕೊಂಡಿಲ್ಲವೆಂದು ಕೀರ್ತಿವರ್ಧನ್ ಸಿಂಗ್ ಸದನದಲ್ಲಿ ಸ್ಪಷ್ಟಪಡಿಸಿದರು.

ಜುಲೈ 29ರಂದು ಅಮೆರಿಕ ರಾಯಭಾರಿ ಕಚೇರಿಯು ವಿದೇಶಾಂಗ ಸಚಿವಾಲಯಕ್ಕೆ ನೀಡಿದ ಮಾಹಿತಿಯೊಂದರಲ್ಲಿ, ತಾನು 2025 ಆಗಸ್ಟ್ 15ರೊಳಗೆ ದೇಶದಲ್ಲಿ ಯುಎಸ್ ಏಯ್ಡ್ ನ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು.

‘‘ಆಗಸ್ಟ್ 11ರಂದು ಹೊಸದಿಲ್ಲಿಯಲ್ಲಿನ ಅಮೆರಿಕ ರಾಯಭಾರಿ ಕಚೇರಿಯ ಆರ್ಥಿಕ ವ್ಯವಹಾರಗಳ ಸಚಿವಾಲಯವು ಹೇಳಿಕೆಯೊಂದನ್ನು ನೀಡಿ, 2025ರ ಆಗಸ್ಟ್ 15ರಿಂದ ಅನ್ವಯವಾಗುವಂತೆ ಭಾರತ ಸರಕಾರದ ಜೊತೆ ಸಹಿ ಹಾಕಲಾದ ಏಳು ಪಾಲುದಾರಿಕಾ ಒಪ್ಪಂದಗಳನ್ನು ರದ್ದುಪಡಿಸಲಾಗಿದೆ’’ ಎಂದು ತಿಳಿಸಿರುವುದಾಗಿ ಸಚಿವರು ಹೇಳಿದರು.

ಪ್ರಸಕ್ತ ಭಾರತದಲ್ಲಿ ಯುಎಸ್ಏಯ್ಡ್ ನ ಶೇ.83ರಷ್ಟು ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಹಾಗೂ ಅದರ ಶೇ.94ರಷ್ಟು ಸಿಬ್ಬಂದಿಯನ್ನು ಕೆಲಸದಿಂದ ಕೈಬಿಡಲಾಗಿದೆ. ಉಳಿದ ಶೇ.17ರಷ್ಟು ಯುಎಸ್ ಏಯ್ಡ್ ನ ಕಾರ್ಯಾಚರಣೆೆಗಳನ್ನು ಹಾಗೂ ವಿದೇಶಿ ನೆರವು ನಿರ್ವಹಣೆಯ ಹೊಣೆಗಾರಿಕೆಯನ್ನು ವಿದೇಶಾಂಗ ಇಲಾಖೆಯು ವಹಿಸಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News