ಶಾಲೆಗಳಲ್ಲಿ ಮೋದಿ ಅವರ ಬಾಲ್ಯ ಆಧಾರಿತ ಚಲನಚಿತ್ರ ಪ್ರದರ್ಶನಕ್ಕೆ ಕೇಂದ್ರದ ನಿರ್ದೇಶನ
ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಾಲ್ಯದ ಘಟನೆಯ ಆಧಾರಿತ ‘ಚಲೋ ಜೀತೆ ಹೈ’ ಚಲನಚಿತ್ರವನ್ನು ಅಕ್ಟೋಬರ್ 2 ರವರೆಗೆ ದೇಶದಾದ್ಯಂತ ಶಾಲೆಗಳಲ್ಲಿ ಪ್ರದರ್ಶಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಸೆಪ್ಟೆಂಬರ್ 11 ರಂದು ಹೊರಡಿಸಿದ ಸರ್ಕ್ಯೂಲರ್ ನಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯವು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE), ಕೇಂದ್ರೀಯ ವಿದ್ಯಾಲಯ ಸಂಘಟನ್ (KVS) ಹಾಗೂ ನವೋದಯ ವಿದ್ಯಾಲಯ ಸಮಿತಿ (NVS) ಅಡಿಯಲ್ಲಿ ಬರುವ ಶಾಲೆಗಳಿಗೆ ಈ ನಿರ್ದೇಶನ ನೀಡಿದೆ. 2018ರಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 2 ರ ಅವಧಿಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕೆಂದು ಸೂಚಿಸಲಾಗಿದೆ.
ಸಚಿವಾಲಯದ ಪ್ರಕಾರ, ಈ ಚಿತ್ರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಹಾಗೂ ಜವಾಬ್ದಾರಿಯ ಅರಿವು ಮೂಡಿಸುವುದರ ಜೊತೆಗೆ ನೈತಿಕ ತಾರ್ಕಿಕತೆ, ಸಾಮಾಜಿಕ-ಭಾವನಾತ್ಮಕ ಕಲಿಕೆ, ಸಹಾನುಭೂತಿ, ಸ್ವಯಂ-ಪ್ರತಿಬಿಂಬ ಮತ್ತು ವಿಮರ್ಶಾತ್ಮಕ ಚಿಂತನೆಗಳನ್ನು ಉತ್ತೇಜಿಸುವಲ್ಲಿ ಸಹಕಾರಿ ಆಗಲಿದೆ.
ಸಚಿವಾಲಯವು ‘ಪ್ರೇರಣ’ ಎಂಬ ಅನುಭವಾತ್ಮಕ ಕಲಿಕಾ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಗುಜರಾತ್‌ನ ವಡ್ನಗರದಲ್ಲಿರುವ ಐತಿಹಾಸಿಕ ವರ್ನಾಕ್ಯುಲರ್ ಶಾಲೆಯಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ಇದೇ ಶಾಲೆಯಲ್ಲಿ ಪ್ರಧಾನಿ ಮೋದಿ ತಮ್ಮ ವಿದ್ಯಾಭ್ಯಾಸ ಆರಂಭಿಸಿದ್ದರು. ಕಥೆ ಹೇಳುವಿಕೆ, ಮೌಲ್ಯಾಧಾರಿತ ಪಾಠಗಳು, ಸ್ಥಳೀಯ ಆಟಗಳು ಹಾಗೂ ಆಡಿಯೋ-ವಿಶುಯಲ್ ಅಧ್ಯಯನವು ಈ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿವೆ. ಇದರ ಭಾಗವಾಗಿ ‘ಚಲೋ ಜೀತೆ ಹೈ’ ನಿಯಮಿತವಾಗಿ ಪ್ರದರ್ಶಿಸಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಸ್ಪಷ್ಟವಾದ ಪ್ರಭಾವ ಕಂಡುಬಂದಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ‘ಚಲೋ ಜೀತೆ ಹೈ’ ಚಿತ್ರವನ್ನು ಮರುಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ.
ಸ್ವಾಮಿ ವಿವೇಕಾನಂದರ ತತ್ವ “ಬಸ್ ವಹಿ ಜೀತೇ ಹೈ, ಜೋ ದೂಸ್ರೋ ಕೆ ಲಿಯೇ ಜೀತೇ ಹೈ” (ಇತರರಿಗಾಗಿ ಬದುಕುವವರೇ ನಿಜವಾದ ವಿಜೇತರು) ಆಧಾರಿತ ಈ ಚಿತ್ರವು, ನಿಸ್ವಾರ್ಥತೆ ಮತ್ತು ಸೇವೆಯ ಸಂದೇಶವನ್ನು ಹೊಸ ಪೀಳಿಗೆಯ ವಿದ್ಯಾರ್ಥಿಗಳಿಗೆ ತಲುಪಿಸಲು ಉದ್ದೇಶಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.