ಜೈಲಿನಲ್ಲಿ ಹದಗೆಟ್ಟ ಸೋನಂ ವಾಂಗ್ಚುಕ್ ರ ಆರೋಗ್ಯ: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜೋಧ್ ಪುರ್ ಏಮ್ಸ್ ಗೆ ದಾಖಲು
ಸೋನಂ ವಾಂಗ್ಚುಕ್ (Photo: PTI)
ಜೈಪುರ: ಜೈಲಿನಲ್ಲಿರುವ ಲಡಾಖ್‌ನ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ವೈದ್ಯಕೀಯ ಪರೀಕ್ಷೆಗಾಗಿ ಜೋಧ್ ಪುರ್ ಏಮ್ಸ್ ಗೆ ದಾಖಲಿಸಲಾಗಿದೆ.
ಶನಿವಾರ ಬೆಳಗ್ಗೆ ಸುಮಾರು 6.30ಕ್ಕೆ ಪೊಲೀಸರು ಸೋನಂ ವಾಂಗ್ಚುಕ್ ಅವರನ್ನು ಜೋಧ್ ಪುರ್ ಕೇಂದ್ರೀಯ ಕಾರಾಗೃಹದಿಂದ ಏಮ್ಸ್ ನ ತುರ್ತು ಚಿಕಿತ್ಸಾ ವಾರ್ಡ್ ಗೆ ಕರೆ ತಂದರು. ಅವರನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ವೈದ್ಯಕೀಯ ನಿಗಾವಣೆಯಲ್ಲಿರಿಸಲಾಗಿತ್ತು.
ಏಮ್ಸ್ ಮೂಲಗಳ ಪ್ರಕಾರ, ವಾಂಗ್ಚುಕ್ ಉದರ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದು, ಅವರು ತಮ್ಮ ದೇಹದ ಹಲವು ಭಾಗಗಳಲ್ಲಿ ನೋವಿದೆ ಎಂದೂ ವೈದ್ಯರಿಗೆ ತಿಳಿಸಿದ್ದಾರೆ. ಶುಕ್ರವಾರ ಕೂಡಾ ಅವರನ್ನು ವೈದ್ಯಕೀಯ ಪರೀಕ್ಷೆಗಳಿಗಾಗಿ ಏಮ್ಸ್ ಸಂಸ್ಥೆಗೆ ಕರೆದೊಯ್ಯಲಾಗಿತ್ತು.
ವೈದ್ಯಕೀಯ ಪರೀಕ್ಷೆಗಳ ನಂತರ, ಅವರನ್ನು ಮತ್ತೆ ಬಿಗಿ ಭದ್ರತೆಯಲ್ಲಿ ಜೋಧ್ ಪುರ್ ಕೇಂದ್ರೀಯ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ಇದಕ್ಕೂ ಮುನ್ನ, ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ಅವರು ತಮ್ಮ ಪತಿಯ ಆರೋಗ್ಯ ಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿ, ಹಿರಿಯ ವಕೀಲ ಕಪಿಲ್ ಸಿಬಲ್ ಮೂಲಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ತಮ್ಮ ಪತಿಯ ಆರೋಗ್ಯ ಸ್ಥಿತಿ ದಿನೇ ದಿನೇ ವಿಷಮಿಸುತ್ತಿದೆ ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.