×
Ad

ಜೈಸಲ್ಮೇರ್: ಹನಿಟ್ರ್ಯಾಪ್‌ಗೆ ಸಿಲುಕಿ ಪಾಕಿಸ್ತಾನಕ್ಕೆ ಸೂಕ್ಷ್ಮಮಾಹಿತಿ ಕಳುಹಿಸುತ್ತಿದ್ದ ಇ-ಮಿತ್ರ ಅಧಿಕಾರಿ ಝಬರಾರಾಮ್ ಬಂಧನ

Update: 2026-01-31 15:17 IST

ಝಬರಾರಾಮ್ (Photo credit: timesnownews.com)

ಜೈಪುರ: ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಲ್ಲ ಪ್ರಕರಣದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಜೈಸಲ್ಮೇರ್ ಜಿಲ್ಲೆಯ ಇ-ಮಿತ್ರ ಅಧಿಕಾರಿಯೋರ್ವನನ್ನು ರಾಜಸ್ಥಾನ ಪೋಲಿಸ್‌ನ ಗುಪ್ತಚರ ಘಟಕವು ಬಂಧಿಸಿದೆ ಎಂದು ವರದಿಯಾಗಿದೆ.

ಪೋಕರನ್‌ನ ಸಂಕ್ಡಾ ಗ್ರಾಮದ ನಿವಾಸಿ ಝಬರಾರಾಮ್ ಬಂಧಿತ ಆರೋಪಿಯಾಗಿದ್ದು,ಆತ ಸುದೀರ್ಘ ಕಾಲದಿಂದ ಐಎಸ್‌ಐ ಏಜೆಂಟ್‌ಗಳ ಜೊತೆ ಸಂಪರ್ಕದಲ್ಲಿದ್ದ ಹಾಗೂ ಗಡಿಯುದ್ದಕ್ಕೂ ಭಾರತೀಯ ಸೇನೆಗೆ ಸಂಬಂಧಿಸಿದ ವ್ಯೂಹಾತ್ಮಕ ಮತ್ತು ಸೂಕ್ಷ್ಮಮಾಹಿತಿಗಳನ್ನು ರವಾನಿಸುತ್ತಿದ್ದ ಎಂದು ಪೋಲಿಸರು ತಿಳಿಸಿದ್ದಾರೆ.

ಝಬರಾರಾಮ್‌ನನ್ನು ಮೊದಲು ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕಿಸಲಾಗಿತ್ತು ಮತ್ತು ನಂತರ ಆತನೊಂದಿಗೆ ನಿಯಮಿತವಾಗಿ ಸಂವಹನವನ್ನು ನಡೆಸಲಾಗುತ್ತಿತ್ತು. ಬಳಿಕ ಆತನನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಲಾಗಿತ್ತು ಮತ್ತು ಹಣದ ಆಮಿಷವನ್ನು ಒಡ್ಡಲಾಗಿತ್ತು ಎನ್ನುವುದು ಪ್ರಾಥಮಿಕ ತನಿಖೆಗಳಿಂದ ಬೆಳಕಿಗೆ ಬಂದಿದೆ.

ಬಂಧನವನ್ನು ದೃಢಪಡಿಸಿದ ಎಡಿಜಿ (ಗುಪ್ತಚರ) ಪ್ರಸನ್ನ ಕುಮಾರ್ ಅವರು, ಆರೋಪಿಯು ಐಎಸ್‌ಐಗಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದ. ಆತನ ಹಣಕಾಸು ವಹಿವಾಟುಗಳು ಮತ್ತು ಡಿಜಿಟಲ್ ಹೆಜ್ಜೆ ಗುರುತುಗಳು ಸೇರಿದಂತೆ ಹಲವಾರು ಕೋನಗಳಲ್ಲಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಹಂಚಿಕೊಳ್ಳಲಾದ ಮಾಹಿತಿಯ ಪೂರ್ಣ ವಿವರಗಳು,ಸಂಭಾವ್ಯ ಸ್ಥಳೀಯ ಸಹಾಯಕರು ಮತ್ತು ಇನ್ನಷ್ಟು ಜನರು ಬೇಹುಗಾರಿಕೆ ಜಾಲದೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳಲು ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News