×
Ad

ಚಬಹಾರ್ ಬಂದರು ಯೋಜನೆ | ಅಮೆರಿಕ ನಿರ್ಬಂಧಗಳಿಂದ ಭಾರತಕ್ಕೆ 6 ತಿಂಗಳುಗಳ ರಿಯಾಯಿತಿ

Update: 2025-10-30 21:01 IST

Photo Credit : indiatoday.in

ಹೊಸದಿಲ್ಲಿ ,ಅ.30: ಇರಾನ್‌ನ ಚಬಹಾರ್ ಬಂದರಿನ ಮೇಲೆ ವಿಧಿಸಿರುವ ನಿರ್ಬಂಧಗಳಿಂದ ಅಮೆರಿಕವು, ಭಾರತಕ್ಕೆ ಆರು ತಿಂಗಳುಗಳ ರಿಯಾಯಿತಿಯನ್ನು ನೀಡಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಅವರು ಗುರುವಾರ ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಈ ವಿಷಯ ತಿಳಿಸಿದ್ದಾರೆ. ಅಮೆರಿಕದ ಈ ನಡೆಯಿಂದಾಗಿ, ಆಯಕಟ್ಟಿನ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಚಬಹಾರ್ ಬಂದರು ಯೋಜನೆಯಲ್ಲಿ ತನ್ನ ಪಾತ್ರವನ್ನು ಮುಂದುವರಿಸಲು ಭಾರತಕ್ಕೆ ಕಾಲಾವಕಾಶ ದೊರೆತಿದೆ. ಪಾಕಿಸ್ತಾನದ ಹೊರಗಿನಿಂದಲೇ ಅಫ್ಘಾನಿಸ್ತಾನ ಹಾಗೂ ಮಧ್ಯ ಕೇಂದ್ರ ಏಶ್ಯದ ನಡುವೆ ಪ್ರಮುಖ ವ್ಯಾಪಾರ ಹಾಗೂ ಸಂಪರ್ಕ ಮಾರ್ಗವನ್ನು ರೂಪಿಸಲು ಭಾರತಕ್ಕೆ ಇದರಿಂದ ಸಾಧ್ಯವಾಗಲಿದೆೆ.

ಚಬಹಾರ್ ಬಂದರು ಯೋಜನೆಯ ಮೇಲೆ ಅಮೆರಿಕವು ನಿರ್ಬಂಧಗಳನ್ನು ಹೇರಿದ ಒಂದು ತಿಂಗಳ ಬಳಿಕ ಈ ತಾತ್ಕಾಲಿಕ ವಿನಾಯಿತಿಯನ್ನು ನೀಡುವ ನಿರ್ಧಾರವನ್ನು ಅಮೆರಿಕವು ಕೈಗೊಂಡಿದೆ.

ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದ ಮೇಲೆ ತನ್ನ ಒತ್ತಡವನ್ನು ಬಿಗಿಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿರುವ ಕ್ರಮಗಳ ಭಾಗವಾಗಿ ಹೇರಲಾದ ಈ ನಿರ್ಬಂಧವು ಭಾರತದ ಮೇಲೂ ಪರಿಣಾಮವನ್ನು ಬೀರಿದೆ.

ಈ ನಿರ್ಬಂಧಗಳು ಚಾಬಹಾರ್ ಬಂದರಿನ ಅಭಿವೃದ್ಧಿಯಲ್ಲಿ ಭಾರತದ ಪಾಲ್ಗೊಳ್ಳುವಿಕೆಗೆ ಅಡ್ಡಿಯುಂಟು ಮಾಡಿದ್ದವು. 2018ರಲ್ಲಿ ಟ್ರಂಪ್ ಆಡಳಿತವು ಇರಾನ್‌ಗೆ ನಿರ್ಬಂಧ ವಿಧಿಸಿದ ಹೊರತಾಗಿಯೂ ಭಾರತೀಯ ಕಂಪೆನಿಗಳು ಚಬಹಾರ್ ಬಂದರಿನಲ್ಲಿ ಕಾರ್ಯನಿರ್ವಹಿಸುವುದಕ್ಕೆ ಅನುಮತಿ ನೀಡಿತ್ತು.

ರಶ್ಯದಿಂದ ಭಾರತದ ತೈಲ ಆಮದುಗಳ ಕುರಿತ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಜೈಸ್ವಾಲ್ ಅವರು ರಶ್ಯದ ತೈಲ ಕಂಪೆನಿಗಳ ಮೇಲೆ ಇತ್ತೀಚೆಗೆ ಅಮೆರಿಕ ವಿಧಿಸಿರುವ ನಿರ್ಬಂಧಗಳ ಮೇಲಿನ ಪರಿಣಾಮವನ್ನು ಅಧ್ಯಯನ ನಡೆಸಲಾಗುವುದೆಂದು ಜೈಸ್ವಾಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News