ಕ್ರೈಸ್ತರ ಆಚರಣೆಗಳ ಮೇಲಿನ ದಾಳಿ ಸಂವಿಧಾನದ ಮೌಲ್ಯಗಳ ಮೇಲಿನ ದಾಳಿಯಾಗಿದೆ: ಶಶಿ ತರೂರ್ ಕಳವಳ
ಕಾಂಗ್ರೆಸ್ ಸಂಸದ ಶಶಿ ತರೂರ್ (File Photo: PTI)
ಹೊಸದಿಲ್ಲಿ: ಕ್ರೈಸ್ತ ಸಂಪ್ರದಾಯಗಳ ಮೇಲಿನ ದಾಳಿಗಳು ಕೇವಲ ಒಂದು ಸಮುದಾಯದ ಮೇಲಿನ ದಾಳಿಯಲ್ಲ. ಬದಲಿಗೆ ಭಾರತದ ಸಂವಿಧಾನಾತ್ಮಕ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಕ್ರಿಸ್ಮಸ್ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಶಿ ತರೂರು, ಕ್ರೈಸ್ತ ಸಂಪ್ರದಾಯಗಳ ಮೇಲಿನ ಇತ್ತೀಚಿನ ದಾಳಿಗಳು ಕೇವಲ ಒಂದು ಸಮುದಾಯದ ಮೇಲಿನ ದಾಳಿಯಲ್ಲ. ಬದಲಾಗಿ ಭಾರತದ ಸಾಂವಿಧಾನಿಕ ಮೌಲ್ಯಗಳ ಮೇಲಿನ ದಾಳಿಗಳಾಗಿವೆ. ಆರಾಧನ ಸ್ವಾತಂತ್ರ್ಯಕ್ಕೆ ಬೆದರಿಕೆ ಎದುರಾದಾಗ ಪ್ರತಿಯೊಬ್ಬ ಭಾರತೀಯನ ಮೇಲೂ ದಾಳಿ ನಡೆಯುತ್ತಿದೆ ಎಂದು ಹೇಳಿದರು.
ಸಾಂಪ್ರದಾಯಿಕವಾಗಿ ಕ್ರಿಸ್ಮಸ್ ವೇಳೆ ಹಲವು ಚರ್ಚ್ ಗಳಿಗೆ ಭೇಟಿ ನೀಡುತ್ತೇನೆ. ಆದರೆ, ಈ ವರ್ಷ ವಿಮಾನ ವಿಳಂಬವಾದ ಕಾರಣ ಎಲ್ಲಾ ಚರ್ಚ್‌ಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ನನಗೆ, ನನ್ನ ಕ್ಷೇತ್ರದ ಸದಸ್ಯರೊಂದಿಗೆ ಐಕ್ಯತೆ ಪ್ರದರ್ಶಿಸುವುದು ಮತ್ತು ಎಲ್ಲಾ ಸಮುದಾಯಗಳ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಗೌರವಿಸುವುದು ಕೇರಳ ರಾಜಕಾರಣಕ್ಕೆ ಕೇಂದ್ರಬಿಂದುವಾಗಿದೆ. ದುಃಖಕರವೆಂದರೆ, ದೇಶದ ವಿವಿಧ ಭಾಗಗಳಲ್ಲಿ ಕ್ರೈಸ್ತ ಸಮುದಾಯದ ಜನರ ಮೇಲೆ ದಾಳಿಗಳು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಸಂಪ್ರದಾಯಗಳ ಮೇಲೆ ದಾಳಿಯಾದಾಗ, ಕೇವಲ ಕ್ರೈಸ್ತ ಸಮುದಾಯದ ಜನರ ಮೇಲೆಯಲ್ಲ. ನಮ್ಮೆಲ್ಲರ ನಮ್ಮೆಲ್ಲರ ಮೇಲೂ ದಾಳಿ ನಡೆಯುತ್ತದೆ. ಪ್ರತಿಯೊಬ್ಬ ಭಾರತೀಯನ ಮೇಲೂ ದಾಳಿ ನಡೆಯುತ್ತದೆ ಎಂದು ಹೇಳಿದರು.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಪುದುಶ್ಶೇರಿಯಲ್ಲಿ ಕ್ರಿಸ್‌ಮಸ್ ಸಂಭ್ರಮದಲ್ಲಿದ್ದ ಗುಂಪಿನ ಮೇಲೆ ನಡೆದ ಹಲ್ಲೆಯು ನಿಜವಾಗಿಯೂ ಆಘಾತಕಾರಿ. ಬಿಜೆಪಿ ಕಾರ್ಯಕರ್ತ ಹಲ್ಲೆ ನಡೆಸಿದ್ದಾನೆ. ಸಂಗೀತ ವಾದ್ಯಗಳಿಗೆ ಹಾನಿ ಮಾಡಿದ್ದಾನೆ ಎಂದು ಹೇಳಲಾಗಿದೆ. "ಇದು ಜಾತ್ಯತೀತ ಸಂಪ್ರದಾಯದ ಮೇಲಿನ ದಾಳಿಯಾಗಿದ್ದು, ರಾಜ್ಯವನ್ನೇ ಬೆಚ್ಚಿಬೀಳಿಸಿದೆ" ಎಂದು ಶಶಿ ತರೂರ್ ಹೇಳಿದ್ದಾರೆ.