ʼಸಾಂತಾಕ್ಲಾಸ್ ಸ್ಕಿಟ್ʼ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪದಲ್ಲಿ ಆಪ್ ನಾಯಕರ ವಿರುದ್ಧ ಪ್ರಕರಣ ದಾಖಲು
Screengrab:X/@Saurabh_MLAgk
ಹೊಸದಿಲ್ಲಿ: ವಾಯು ಮಾಲಿನ್ಯದ ಕುರಿತು ಸಾಂತಾಕ್ಲಾಸ್ ಸ್ಕಿಟ್ ವೀಡಿಯೊ ಹಂಚಿಕೊಂಡ ಬೆನ್ನಲ್ಲೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಆಪ್ ನಾಯಕರಾದ ಸೌರಭ್ ಭಾರದ್ವಾಜ್, ಸಂಜೀವ್ ಝಾ ಮತ್ತು ಆದಿಲ್ ಅಹ್ಮದ್ ಖಾನ್ ವಿರುದ್ಧ ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಮೂವರು ಆಪ್ ನಾಯಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299, 302(3) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಕೀಲೆ ಖುಷ್ಬೂ ಜಾರ್ಜ್ ಅವರು ಈ ಕುರಿತು ದೂರು ದಾಖಲಿಸಿದ್ದಾರೆ. ಮೂವರು ನಾಯಕರ ನಡೆಯು ಕ್ರೈಸ್ತ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಆಳವಾದ ನೋವುಂಟುಮಾಡಿದೆ. ದಿಲ್ಲಿಯಲ್ಲಿ ಕೋಮು ಸಾಮರಸ್ಯಕ್ಕೆ ಬೆದರಿಕೆ ಹಾಕಿದೆ ಎಂದು ಹೇಳಿದ್ದಾರೆ.
ಪ್ರಪಂಚದಾದ್ಯಂತ ಕ್ರೈಸ್ತರ ಗೌರವಯುತ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರತೀಕವಾಗಿರುವ ಸಾಂತಾಕ್ಲಾಸ್ ವೇಷ ಧರಿಸಿದ ವ್ಯಕ್ತಿಯನ್ನು ಅವಮಾನಕರ ಮತ್ತು ಗೇಲಿ ಮಾಡುವ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಡಿಸೆಂಬರ್ 17ರಂದು ಆಪ್ ನಾಯಕರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಒಂದು ವ್ಯಂಗ್ಯ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವೀಡಿಯೊದಲ್ಲಿ ವಾಯು ಮಾಲಿನ್ಯದಿಂದ ಸಾಂತಾ ಕ್ಲಾಸ್ ಮೂರ್ಛೆ ಹೋಗುವುದನ್ನು ತೋರಿಸಲಾಗಿತ್ತು.