ಚತ್ತೀಸ್‌ಗಢ | ಭದ್ರತಾ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಶಂಕಿತ ಮಾವೋವಾದಿಗಳು ಮೃತ್ಯು
PC : NDTV
ರಾಯಪುರ, ಸೆ. 22: ನಾರಾಯಣಪುರ ಜಿಲ್ಲೆಯ ಅಬುಜ್ಮಾದ್ ಪ್ರದೇಶದಲ್ಲಿ ಭದ್ರತಾ ಪಡೆ ಹಾಗೂ ಶಂಕಿತ ಮಾವೋವಾದಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ)ಯ ಕನಿಷ್ಠ ಇಬ್ಬರು ಸದಸ್ಯರು ಹತರಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮಹಾರಾಷ್ಟ್ರ-ಚತ್ತೀಸ್‌ಗಢ ಗಡಿ ಸಮೀಪದ ನಾರಾಯಣಪುರ ಜಿಲ್ಲೆಯ ಅಬುಜ್ಮಾದ್ ಪ್ರದೇಶದಲ್ಲಿ ಮಾವೋವಾದಿಗಳ ಇರುವಿಕೆಯ ಕುರಿತು ಬೇಹುಗಾರಿಕೆ ಮಾಹಿತಿಯ ಆಧಾರದಲ್ಲಿ ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು.
‘‘ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ ಭದ್ರತಾ ಪಡೆ ಹಾಗೂ ಶಂಕಿತ ಮಾವೋವಾದಿಗಳ ನಡುವೆ ಗುಂಡಿನ ಕಾಳಗ ನಡೆಯಿತು. ಗುಂಡಿನ ಕಾಳಗ ನಿಂತ ಬಳಿಕ ಆ ಪ್ರದೇಶದಲ್ಲಿ ಮಾವೋವಾದಿಗಳ ಎರಡು ಮೃತದೇಹಗಳು ಪತ್ತೆಯಾಗಿವೆ. ಈ ಮೃತದೇಹಗಳ ಗುರುತು ಇದುವರೆಗೆ ಪತ್ತೆಯಾಗಿಲ್ಲ’’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
‘‘ಗುಂಡಿನ ಕಾಳಗ ನಡೆದ ಪ್ರದೇಶದಲ್ಲಿ ಭದ್ರತಾ ಪಡೆ ಎಕೆ 47 ರೈಫಲ್, ಸ್ಪೋಟಕ ಸಾಧನಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಹಾಗೂ ದಿನನಿತ್ಯದ ಬಳಕೆಯ ವಸ್ತುಗಳು ಪತ್ತೆಯಾಗಿವೆ’’ ಎಂದು ಅವರು ತಿಳಿಸಿದ್ದಾರೆ.