×
Ad

ಚೀನಾ ಗಡಿಯಲ್ಲಿ ಯುದ್ಧಭೂಮಿ ಪ್ರವಾಸೋದ್ಯಮಕ್ಕಾಗಿ ಚೋ ಲಾ ಮತ್ತು ಡೋಕ್ಲಾಮ್ ಪಾಸ್‌ ಗಳನ್ನು ತೆರೆದ ಭಾರತ

Update: 2025-12-15 23:15 IST

photo : thehindu

ಗುವಾಹಟಿ,ಡಿ.15: ಭಾರತವು ಸೋಮವಾರ ಸಿಕ್ಕಿಮ್‌ನಲ್ಲಿ ಐತಿಹಾಸಿಕ ಚೋ ಲಾ ಮತ್ತು ಡೋಕ್ಲಾಮ್ ಪಾಸ್‌ಗಳನ್ನು (ಕಣಿವೆ ಮಾರ್ಗ) ತೆರೆಯುವ ಮೂಲಕ ‘ರಣಭೂಮಿ ದರ್ಶನ’ ಉಪಕ್ರಮದಡಿ ಚೀನಾ ಗಡಿಯಲ್ಲಿ ಯುದ್ಧಭೂಮಿ ಪ್ರವಾಸೋದ್ಯಮಕ್ಕೆ ಔಪಚಾರಿಕವಾಗಿ ಚಾಲನೆ ನೀಡಿದೆ.

2017ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಗಡಿ ಬಿಕ್ಕಟ್ಟಿನ ಬಳಿಕ ಡೋಕ್ಲಾಮ್ ಗಮನವನ್ನು ಸೆಳೆದಿದ್ದರೆ,1967ರಲ್ಲಿ ಭಾರತೀಯ ಮತ್ತು ಚೀನಿ ಪಡೆಗಳ ನಡುವೆ ಘರ್ಷಣೆ ನಡೆದ ಸ್ಥಳಗಳಲ್ಲಿ ಚೋ ಲಾ ಕೂಡ ಒಂದಾಗಿತ್ತು. ಈಶಾನ್ಯ ಭಾರತದಲ್ಲಿ,ವಿಶೇಷವಾಗಿ ಅರುಣಾಚಲ ಪ್ರದೇಶದಲ್ಲಿ ಇಂತಹ ಹಲವಾರು ಯುದ್ಧಭೂಮಿಗಳಿವೆ.

ಸಿಕ್ಕಿಂ ಮುಖ್ಯಮಂತ್ರಿ ಪ್ರೇಮಸಿಂಗ್ ತಮಾಂಗ್ ಅವರು ಎರಡು ಪಾಸ್‌ಗಳ ತೆರೆಯುವಿಕೆಯ ದ್ಯೋತಕವಾಗಿ 25 ಬೈಕ್‌ಗಳು ಮತ್ತು ಇತರ ವಾಹನಗಳಿಗೆ ಹಸಿರು ನಿಶಾನೆಯನ್ನು ತೋರಿಸಿದರು.

ಭಾರತೀಯ ಸೇನೆ ಮತ್ತು ಪ್ರವಾಸೋದ್ಯಮ ಸಚಿವಾಲಯದ ಜಂಟಿ ಉಪಕ್ರಮವಾಗಿರುವ ‘ಭಾರತ ರಣಭೂಮಿ ದರ್ಶನ’ ಐತಿಹಾಸಿಕ ಯುದ್ಧವಲಯಗಳು ಮತ್ತು ಮಿಲಿಟರಿ ಮಹತ್ವದ ಸ್ಥಳಗಳಿಗೆ ಭೇಟಿ ನೀಡಲು ನಾಗರಿಕರಿಗೆ ಅವಕಾಶವನ್ನು ಒದಗಿಸುತ್ತದೆ. ಜನರು ಭಾರತೀಯ ಸೇನೆಯ ಇತಿಹಾಸವನ್ನು ತಿಳಿದುಕೊಳ್ಳಲು ಮತ್ತು ಯೋಧರ ತ್ಯಾಗಗಳನ್ನು ಗೌರವಿಸಲು ಅನುವು ಮಾಡಿಕೊಡುವುದು ಇದರ ಉದ್ದೇಶವಾಗಿದೆ.

ಚೋ ಲಾ ಮತ್ತು ಡೋಕ್ಲಾಮ್ ಪಾಸ್‌ಗಳನ್ನು ತೆರೆದಿರುವುದು ಕೇಂದ್ರದ ವೈಬ್ರಂಟ್ ವಿಲೇಜ್ ಕಾರ್ಯಕ್ರಮದ ಭಾಗವಾಗಿದ್ದು, ಗಡಿ ಪ್ರದೇಶದ ಪ್ರವಾಸೋದ್ಯಮವನ್ನು ಬಲಗೊಳಿಸುವುದು ಮತ್ತು ನಿಯಂತ್ರಿತ ಪ್ರವಾಸೋದ್ಯಮ ಚಟುವಟಿಕೆಗಳ ಮೂಲಕ ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಈ ಕಾರ್ಯಕ್ರಮವು ಹೊಂದಿದೆ ಎಂದು ತಮಾಂಗ್ ಹೇಳಿದರು.

ಯುದ್ಧಭೂಮಿ ಪ್ರವಾಸೋದ್ಯಮದ ವಿಶಾಲ ಪರಿಕಲ್ಪನೆಯಡಿ ರೂಪಿಸಲಾಗಿರುವ ಈ ಕಾರ್ಯಕ್ರಮವು ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗಗಳ ಕುರಿತು ಜನರಲ್ಲಿ ಅರಿವನ್ನು ಮೂಡಿಸುತ್ತದೆ ಮತ್ತು ದೇಶಭಕ್ತಿಯ ಪ್ರಜ್ಞೆಯನ್ನು ಬೆಳೆಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು,ಪ್ರವಾಸೋದ್ಯಮ ಚಟುವಟಿಕೆಗಳನ್ನು ಬೆಂಬಲಿಸಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದೂ ತಮಾಂಗ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News