Messi ಭೇಟಿ ವೇಳೆ ಸಾಲ್ಟ್ ಲೇಕ್ ಕ್ರೀಡಾಂಗಣಲ್ಲಿ ದಾಂಧಲೆ | CBI, EDಯಿಂದ ತನಿಖೆ ಕೋರಿ ಕಲ್ಕತಾ ಹೈಕೋರ್ಟ್ ಗೆ PIL
photo: timesofindia
ಕೋಲ್ಕತಾ, ಡಿ. 15: ಸಾಲ್ಟ್ ಲೇಕ್ ಸ್ಟೇಡಿಯನಲ್ಲಿ ನಡೆದ ದಾಂಧಲೆಯ ತನಿಖೆಗೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಅಸೀಮ್ ಕುಮಾರ್ ರಾಯ್ ನೇತೃತ್ವದ ತನಿಖಾ ಸಮಿತಿ ರೂಪಿಸುವ ಪಶ್ಚಿಮ ಬಂಗಾಳ ಸರಕಾರದ ನಿರ್ಧಾರ ಪ್ರಶ್ನಿಸಿ ಕೋಲ್ಕತಾದ ಉಚ್ಚ ನ್ಯಾಯಾಲಯದಲ್ಲಿ ಸೋಮವಾರ 3 ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಗಳನ್ನು ಸಲ್ಲಿಸಲಾಗಿದೆ.
ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ), ಜಾರಿ ನಿರ್ದೇಶನಾಲಯ (ED), ಗಂಭೀರ ವಂಚನೆ ತನಿಖೆ ಕಚೇರಿ (ಎಸ್‌ಎಫ್‌ಐಒ)ಯಂತಹ ಕೇಂದ್ರೀಯ ಸಂಸ್ಥೆಗಳಿಗೆ ಹಸ್ತಾಂತರಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ. ಅವರು ತಮ್ಮ ಬೇಡಿಕೆಯನ್ನು ಬೆಂಬಲಿಸಲು ಘಟನೆಯ ತೀವ್ರತೆ, ಜನಸಂದಣಿಯ ನಿರ್ವಹಣೆ ಹಾಗೂ ಭದ್ರತೆಯಲ್ಲಿ ಲೋಪದ ಕುರಿತು ಗಮನ ಸೆಳೆದಿದ್ದಾರೆ.
ಹಿಂಸಾಚಾರಕ್ಕೆ ಕಾರಣವಾದ ಅಂಶಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ರಾಜ್ಯ ಮಟ್ಟದ ತನಿಖೆಯನ್ನು ಕೇಂದ್ರೀಯ ಸಂಸ್ಥೆಗಳಿಗೆ ವರ್ಗಾಯಿಸಬೇಕೆಂದು ಅರ್ಜಿಗಳು ಕೋರಿವೆ.
ಪಶ್ಚಿಮಬಂಗಾಳ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ಹಾಗೂ ನ್ಯಾಯವಾದಿಗಳಾದ ಸಬ್ಯಸಾಚಿ ಚಟರ್ಜಿ, ಮೈನಕ್ ಘೋಶಾಲ್ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರತ್ಯೇಕವಾಗಿ ಸಲ್ಲಿಸಿದ್ದಾರೆ.
ಈ ಅರ್ಜಿಗಳನ್ನು ನ್ಯಾಯಾಲಯ ಈ ವಾರಾಂತ್ಯದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.