×
Ad

ಬಿಜೆಪಿ ನಾಯಕನ ಫಾರ್ಮ್ ಹೌಸ್ ನಲ್ಲಿ ಅಕ್ರಮ ಅಫೀಮು ಬೆಳೆ ಪತ್ತೆ; ಪಕ್ಷದಿಂದ ಅಮಾನತು

Update: 2026-03-08 16:36 IST

ಸಾಂದರ್ಭಿಕ ಚಿತ್ರ | Photo Credit : freepik

ರಾಯ್ಪುರ: ಛತ್ತೀಸ್ಗಢದ ದುರ್ಗ್ ಜಿಲ್ಲೆಯ ಸಮೋದಾ ಗ್ರಾಮದಲ್ಲಿರುವ ಫಾರ್ಮ್ಹೌಸ್ನಲ್ಲಿ ಅಕ್ರಮ ಅಫೀಮು ಬೆಳೆ ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕ ಹಾಗೂ ಬಿಜೆಪಿ ಕಿಸಾನ್ ಮೋರ್ಚಾದ ಅಕ್ಕಿ ಗಿರಣಿ ಸಂಸ್ಕರಣಾ ಯೋಜನೆಯ ರಾಜ್ಯ ಸಂಚಾಲಕ ವಿನಯ್ ತಾಮ್ರಕರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ.

ಸಮೋದಾ ಗ್ರಾಮದಲ್ಲಿರುವ ತಮ್ಮ ಫಾರ್ಮ್ಹೌಸ್ನಲ್ಲಿ ಪೊಲೀಸರು ಅಕ್ರಮ ಅಫೀಮು ಕೃಷಿಯನ್ನು ಪತ್ತೆಹಚ್ಚಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ದುರ್ಗ್ ಜಿಲ್ಲೆಯ ಬಿಜೆಪಿ ನಾಯಕರೊಬ್ಬರು ತಮ್ಮ ಫಾರ್ಮ್ ಹೌಸ್ ನಲ್ಲಿ ಒಂದೂವರೆ ಎಕರೆಗೂ ಹೆಚ್ಚು ಭೂಮಿಯಲ್ಲಿ ಅಫೀಮು ಬೆಳೆಸುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಛತ್ತೀಸ್ಗಢದಲ್ಲಿ ರಾಜಕೀಯ ಬಿರುಗಾಳಿ ಎದ್ದಿದೆ. ಈ ಬೆಳವಣಿಗೆಗೆ ಸಂಬಂಧಿಸಿ ಪಕ್ಷವು ತ್ವರಿತ ಕ್ರಮ ಕೈಗೊಂಡಿದ್ದು, ವಿರೋಧ ಪಕ್ಷಗಳಿಂದ ತೀವ್ರ ರಾಜಕೀಯ ದಾಳಿಗೂ ಕಾರಣವಾಗಿದೆ.

ಪಕ್ಷದ ಪ್ರತಿಷ್ಠೆಗೆ ಗಂಭೀರ ಹಾನಿಯಾಗಿದೆ ಎಂದು ಉಲ್ಲೇಖಿಸಿ, ರಾಜ್ಯ ಬಿಜೆಪಿ ಅಧ್ಯಕ್ಷ ಕಿರಣ್ ಸಿಂಗ್ ಡಿಯೋ ಅವರ ಸೂಚನೆಯ ಮೇರೆಗೆ ಮಾರ್ಚ್ 7ರಂದು ಬಿಜೆಪಿ ರಾಜ್ಯ ಕಚೇರಿ ಅಮಾನತು ಆದೇಶ ಹೊರಡಿಸಿದೆ.

ಅಕ್ರಮ ಬೆಳೆಗೆ ಸಂಬಂಧಿಸಿದಂತೆ ಪೊಲೀಸರು ವಿನಯ್ ತಾಮ್ರಕರ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಗುತ್ತಿಗೆಗೆ ಪಡೆದ ಕೃಷಿ ಭೂಮಿಯಲ್ಲಿ ಈ ಅಫೀಮು ಬೆಳೆ ರಹಸ್ಯವಾಗಿ ಬೆಳೆಸಲಾಗುತ್ತಿತ್ತು.

ದಾಳಿಯ ಒಂದು ದಿನದ ನಂತರ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸಮೋದಾ ಗ್ರಾಮದಲ್ಲಿರುವ ಸ್ಥಳಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ರಾಜಕೀಯ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿತು. ಬಿಜೆಪಿ ನಾಯಕನಿಗೆ ಸಂಬಂಧಿಸಿದ ಫಾರ್ಮ್ಹೌಸ್ ಹುಲ್ಲುಗಾವಲು ಪ್ರದೇಶಗಳು ಸೇರಿ ಸುಮಾರು 150 ಎಕರೆ ಭೂಮಿಯಲ್ಲಿ ಹರಡಿಕೊಂಡಿದೆ ಎಂದು ಬಘೇಲ್ ಆರೋಪಿಸಿದ್ದಾರೆ. ಆರೋಪಿಗಳು ಪ್ರಬಲ ರಾಜಕೀಯ ಸಂಪರ್ಕ ಹೊಂದಿದ್ದಾರೆ ಎಂದೂ ಅವರು ಹೇಳಿದ್ದಾರೆ.

“ಈ ಅಕ್ರಮ ಕೃಷಿಯಲ್ಲಿ ಯಾವ ಸಚಿವರು ಮತ್ತು ಶಾಸಕರು ಭಾಗಿಯಾಗಿದ್ದಾರೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು,” ಎಂದು ಬಘೇಲ್ ಒತ್ತಾಯಿಸಿದರು. ಆಡಳಿತಾತ್ಮಕ ನಿಷ್ಕ್ರಿಯತೆಯೇ ಈ ಕಾರ್ಯಾಚರಣೆ ಮುಂದುವರಿಯಲು ಅವಕಾಶ ಮಾಡಿಕೊಟ್ಟಿರಬಹುದು ಎಂದು ಅವರು ಸೂಚಿಸಿದರು.

ತಪಾಸಣೆಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ ಪರಿಣಾಮ ಪರಿಸ್ಥಿತಿ ಕೆಲಕಾಲ ಉದ್ವಿಗ್ನಗೊಂಡಿತು. ಪೊಲೀಸರು ಹೊಲಕ್ಕೆ ಪ್ರವೇಶವನ್ನು ತಡೆಯಲು ಪ್ರಯತ್ನಿಸಿದಾಗ ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ಉಂಟಾಯಿತು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಆ ಪ್ರದೇಶದಲ್ಲಿ ನಿಯೋಜಿಸಲಾಯಿತು.

ವಿನಯ್ ತಾಮ್ರಕರ್ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಅಫೀಮು ಬೆಳೆ ಪತ್ತೆಯಾದ ಭೂಮಿ ತನ್ನದಲ್ಲ ಆಪಾದಿತ ಅಫೀಮು ಕೃಷಿಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ.

ಅವರ ನಿರಾಕರಣೆಯ ನಡುವೆಯೂ ಬಿಜೆಪಿ ವಿವಾದದಿಂದ ಅಂತರ ಕಾಯ್ದುಕೊಂಡಿದ್ದು, ತ್ವರಿತ ಕ್ರಮ ಕೈಗೊಂಡಿದೆ. ತಾಮ್ರಕರ್ ಅವರನ್ನು ಅವರ ಸಂಘಟನಾತ್ಮಕ ಹುದ್ದೆಯಿಂದ ತೆಗೆದುಹಾಕಿ ಹೆಚ್ಚಿನ ತನಿಖೆ ನಡೆಯುವವರೆಗೆ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News