ಭಾರತದ ಗಡಿ ಸಮೀಪ ಚೀನಾದಿಂದ ರಹಸ್ಯವಾಗಿ ವಾಯುರಕ್ಷಣಾ ನೆಲೆ ನಿರ್ಮಾಣ? : ಉಪಗ್ರಹ ಚಿತ್ರಗಳಿಂದ ಬಹಿರಂಗ
Photo Credit : indiatoday.in
ಹೊಸದಿಲ್ಲಿ,ಅ.24: ಭಾರತದ ಗಡಿಗೆ ತಾಗಿಕೊಂಡಿರುವ ಟಿಬೆಟ್‌ನ ಪಾಂಗೊಂಗ್ ಸರೋವರದ ಸಮೀಪ ಚೀನಾವು ಸೇನಾ ನೆಲೆಯೊಂದನ್ನು ರಹಸ್ಯವಾಗಿ ನಿರ್ಮಿಸುತ್ತಿರುವುದು ಉಪಗ್ರಹ ಚಿತ್ರಗಳಿಂದ ಬೆಳಕಿಗೆ ಬಂದಿರುವುದಾಗಿ ಇಂಡಿಯಾ ಟುಡೇ ಸುದ್ದಿಜಾಲತಾಣ ವರದಿ ಮಾಡಿದೆ.
ಚೀನಾ ನಿರ್ಮಿಸುತ್ತಿರುವ ಈ ಸೇನಾನೆಲೆಯು 2020ರಲ್ಲಿ ಭಾರತೀಯ ಹಾಗೂ ಚೀನಿ ಸೇನಾಪಡೆಗಳು ಘರ್ಷಣೆ ನಡೆಸಿದ ಗಲ್ವಾನ್ ಕಣಿವೆ ಪ್ರದೇಶದಿಂದ 110 ಕಿ.ಮೀ. ದೂರದಲ್ಲಿದೆ.
ಭಾರತ-ಚೀನಾ ಗಡಿಯಲ್ಲಿ ತನ್ನ ನೆಲೆಯನ್ನು ಬಲಪಡಿಸುವ ಚೀನಾದ ಪ್ರಯತ್ನ ಇದಾಗಿದೆಯೆಂದು ರಕ್ಷಣಾ ತಜ್ಞರು ಅಭಿಪ್ರಾಯಿಸಿದ್ದಾರೆ. ಚೀನಿ ಸೇನೆಯು ಪಾಂಗೊಂಗ್ ಸರೋವರದ ಪೂರ್ವ ದಂಡೆಯ ಮೇಲೆ ನೂತನ ವಾಯುರಕ್ಷಣಾ ನೆಲೆಯನ್ನು , ಬ್ಯಾರಾಕ್‌ಗಳು, ರಕ್ಷಣಾ ವಾಹನಗಳ ಶೆಡ್‌ಗಳು, ಶಸ್ತ್ರಾಸ್ತ್ರ ಸಂಗ್ರಹಾಗಾರಗಳು ಹಾಗೂ ರಾಡಾರ್ ನೆಲೆಗಳನ್ನು ಈ ಸೇನಾನೆಲೆಯು ಒಳಗೊಂಡಿದೆ ಎನ್ನಲಾಗಿದೆ.
ಕ್ಷಿಪಣಿಗಳ ಉಡಾವಣೆಗೆ ಬಳಸಲಾಗುವ ಟಿಇಎಲ್ ವಾಹನಗಳಿಗಾಗಿಯೂ ಚೀನಿ ಸೇನೆಯು ಬಂಕರ್‌ಗಳನ್ನು ನಿರ್ಮಿಸುತ್ತಿದೆ. ನೆಲದಿಂದ ಗಗನಕ್ಕೆ ಉಡಾವಣೆಗೊಳಿಸುವ ದೀರ್ಘ ವ್ಯಾಪ್ತಿಯ ಎಚ್9 ಕ್ಷಿಪಣಿಗಳನ್ನು ಬಚ್ಚಿಡಲು ಕಾಂಕ್ರಿಟ್ ಶೆಲ್ಟರ್‌ಗಳನ್ನು ಕೂಡಾ ಚೀನಾ ಇಲ್ಲಿ ನಿರ್ಮಿಸುತ್ತಿದೆಯೆಂದು ವರದಿಗಳು ತಿಳಿಸಿವೆ.
ಅಮೆರಿಕ ಮೂಲದ ಭೌಗೋಳಿಕ ಬೇಹುಗಾರಿಕಾ ಸಂಸ್ಥೆ ಅಲ್‌ಸೋರ್ಸ್ ಅನಾಲಿಸಿಸ್, ಚೀನಾ ನಿರ್ಮಿಸುತ್ತಿರುವ ಈ ವಾಯುರಕ್ಷಣಾ ನೆಲೆಯನ್ನು ಪತ್ತೆಹಚ್ಚಿದೆ. ಎಲ್‌ಎಸಿಯಿಂದ 65 ಕಿ.ಮೀ. ದೂರದಲ್ಲಿರುವ ಟಿಬೆಟ್‌ನ ಪ್ರದೇಶವೊಂದರಲ್ಲಿ ಚೀನಿಯರು ಇನ್ನೊಂದು ನೆಲೆಯನ್ನು ನಿರ್ಮಿಸುತ್ತಿರುವುದನ್ನು ಉಪಗ್ರಹ ಚಿತ್ರವು ಗುರುತಿಸಿದೆೆ. ಇದು ಭಾರತವು ಇತ್ತೀಚೆಗೆ 230 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿದ ನ್ಯೋಮಾ ವಾಯುನೆಲೆಗೆ ನೇರ ಎದುರು ದಿಕ್ಕಿನಲ್ಲಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿಕೊಟ್ಟಿವೆ ಎಂದು ವರದಿಗಳು ತಿಳಿಸಿವೆ.