×
Ad

ಉಲ್ಬಣಗೊಳ್ಳುತ್ತಿರುವ ವ್ಯಾಪಾರ ಸಮರ: ಅಮೆರಿಕದ ಸುಂಕ ನೀತಿಯ ವಿರುದ್ಧ ಜೊತೆಗೂಡುವಂತೆ ಭಾರತಕ್ಕೆ ಚೀನಾ ಕರೆ

Update: 2025-04-09 15:50 IST
File Photo: ANI

ಹೊಸದಿಲ್ಲಿ: ಇತ್ತೀಚಿನ ಅಮೆರಿಕದ ಸುಂಕ ಹೆಚ್ಚಳ ನೀತಿಯಿಂದ ಉಲ್ಬಣಗೊಂಡಿರುವ ವ್ಯಾಪಾರ ಸಮರದ ಹಿನ್ನೆಲೆಯಲ್ಲಿ, ಚೀನಾ ಮತ್ತು ಭಾರತದ ನಡುವೆ ಐಕ್ಯಮತ ಮೂಡಬೇಕಾದ ಅಗತ್ಯವಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಕರೆ ನೀಡಿದೆ.

ಭಾರತ ಮತ್ತು ಚೀನಾ ನಡುವಿನ ವ್ಯಾಪಾರ ಒಪ್ಪಂದದಿಂದ ಇಬ್ಬರಿಗೂ ಲಾಭವಾಗಲಿದೆ ಎಂದು ಮಂಗಳವಾರ (ಎಪ್ರಿಲ್ 8) ಒತ್ತಿ ಹೇಳಿದ್ದ ಚೀನಾ ರಾಯಭಾರ ಕಚೇರಿಯ ವಕ್ತಾರ ಯು ಜಿಂಗ್, ಅಮೆರಿಕ ಸರಕಾರದ ಸುಂಕ ನೀತಿಯಿಂದಾಗಿ ಎದುರಾಗಿರುವ ಸವಾಲುಗಳನ್ನು ಎದುರುಗೊಳ್ಳಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಉತ್ತೇಜಿಸಿದ್ದರು.

ಇದಕ್ಕೂ ಮುನ್ನ, ಎಪ್ರಿಲ್ 2, 2025ರಂದು ಎಲ್ಲ ಆಮದುಗಳ ಮೇಲೆ ಶೇ. 10ರ ಮೂಲ ಸುಂಕ ನೀತಿಯನ್ನು ಪ್ರಕಟಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಯ್ದ ದೇಶಗಳ ಆಮದಿನ ಮೇಲೆ ಅಧಿಕ ದರದ ಸುಂಕವನ್ನೂ ವಿಧಿಸಿದ್ದರು. ಇದರ ಫಲವಾಗಿ, ಚೀನಾವು ಅಮೆರಿಕಕ್ಕೆ ಮಾಡುವ ರಫ್ತಿನ ಮೇಲೆ ಒಟ್ಟಾರೆ ಶೇ. 54ರಷ್ಟು ಸುಂಕವನ್ನು ಎದುರಿಸುತ್ತಿದ್ದರೆ, ಭಾರತದ ಮೇಲೆ ಶೇ. 26ರಷ್ಟು ಸುಂಕ ಹೇರಲಾಗಿದೆ. ಅಮೆರಿಕದ ವ್ಯಾಪಾರ ಅಸಮತೋಲನ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಈ ಸುಂಕ ನೀತಿಯಿಂದಾಗಿ, ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದೆ.

ಇದಕ್ಕೆ ಪ್ರತಿಯಾಗಿ, ಎಪ್ರಿಲ್ 10, 2025ರಿಂದ ಅನ್ವಯವಾಗುವಂತೆ ಚೀನಾ ದೇಶವು ಅಮೆರಿಕದ ಸರಕುಗಳ ಆಮದಿನ ಮೇಲೆ ಶೇ. 34ರಷ್ಟು ಸುಂಕ ಹೇರಿಕೆ ಪ್ರಕಟಿಸಿದೆ. ಇದಕ್ಕೆ ಪ್ರತಿಯಾಗಿ, ಒಂದು ವೇಳೆ ಚೀನಾವೇನಾದರೂ ತನ್ನ ಪ್ರತೀಕಾರದ ಕ್ರಮವನ್ನು ಹಿಂಪಡೆಯದಿದ್ದರೆ, ಚೀನಾದ ಆಮದುಗಳ ಮೇಲೆ ಶೇ. 50ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಅಮೆರಿಕದೊಂದಿಗಿನ ವ್ಯಾಪಾರ ಸಂಘರ್ಷ ಉಲ್ಬಣಗೊಳ್ಳುತ್ತಾ ಸಾಗಿರುವುದರಿಂದ, ಅಮೆರಿಕ ವಿರುದ್ಧ ಮೈತ್ರಿಯೊಂದನ್ನು ರಚಿಸಲು ಚೀನಾ ಈ ಐಕ್ಯಮತದ ಕರೆ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News