ಚೀನಾ ಕಮ್ಯುನಿಸ್ಟ್ ಪಕ್ಷದಿಂದ ಬಿಜೆಪಿ, ಆರೆಸ್ಸೆಸ್ ಭೇಟಿ; ಸಮಯ, ಉದ್ದೇಶ ಪ್ರಶ್ನಿಸಿದ ಕಾಂಗ್ರೆಸ್
Photo Credit : Arun Singh/ X
ಹೊಸದಿಲ್ಲಿ, ಜ. 14: ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರನ್ನು ಪಕ್ಷದ ಪ್ರಧಾನ ಕಚೇರಿಯಲ್ಲಿ ಭೇಟಿಯಾದ ಒಂದು ದಿನದ ಬಳಿಕ, ಚೀನಾ ಕಮ್ಯುನಿಸ್ಟ್ ಪಾರ್ಟಿ (ಸಿಪಿಸಿ)ಯ ನಿಯೋಗವೊಂದು ಮಂಗಳವಾರ ಹೊಸದಿಲ್ಲಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಹಿರಿಯ ಪದಾಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿತು.
ಹಿರಿಯ ಬಿಜೆಪಿ ನಾಯಕರೂ ಮಾತುಕತೆಯ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗದ ಭೇಟಿಯನ್ನು ‘‘ಸೌಜನ್ಯದ ಭೇಟಿ’’ ಎಂದಷ್ಟೇ ಅವರು ಬಣ್ಣಿಸಿದ್ದಾರೆ.
ಈ ನಡುವೆ, ಚೀನಾ ಕಮ್ಯುನಿಸ್ಟ್ ಪಕ್ಷ ಹಾಗೂ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವಿನ ಭೇಟಿಯ ಸಮಯ ಮತ್ತು ಉದ್ದೇಶವನ್ನು ಕಾಂಗ್ರೆಸ್ ಪ್ರಶ್ನಿಸಿದೆ.
‘‘ಭೇಟಿಯ ಬಗ್ಗೆ ಆಕ್ಷೇಪವಿಲ್ಲ. ಮಾತುಕತೆಯ ಬಗ್ಗೆ ಆಕ್ಷೇಪವಿಲ್ಲ’’ ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದರು. ‘‘ಸಮಸ್ಯೆ ಇರುವುದು ಬಿಜೆಪಿಯ ಸೋಗಲಾಡಿತನ ಮತ್ತು ವಂಚನೆಯ ಬಗ್ಗೆ’’ ಎಂದು ಅವರು ಹೇಳಿದರು.
ಕೆಲವು ವರ್ಷಗಳ ಹಿಂದೆ, ಚೀನಾ ಕಮ್ಯುನಿಸ್ಟ್ ಪಕ್ಷದೊಂದಿಗೆ ತಿಳುವಳಿಕೆ ಪತ್ರವೊಂದಕ್ಕೆ ಸಹಿ ಹಾಕುವ ಮೂಲಕ ಕಾಂಗ್ರೆಸ್ ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಗುರಿಪಡಿಸಿದೆ ಎಂದು ಬಿಜೆಪಿ ಆರೋಪಿಸಿತ್ತು.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಮುಚ್ಚಿದ ಬಾಗಿಲ ಸಭೆಯ ಗಂಟೆಗಳ ಬಳಿಕ, ಜಮ್ಮು ಮತ್ತು ಕಾಶ್ಮೀರದ ಶಕ್ಸ್‌ಗಮ್ ಕಣಿವೆ ತನ್ನದೆಂದು ಚೀನಾ ಪ್ರತಿಪಾದಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ವಿವಾದಿತ ಪ್ರದೇಶದಲ್ಲಿ ಚೀನಾ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿದೆ ಎಂಬ ವರದಿಗಳ ನಡುವೆ, ಆಡಳಿತಾರೂಢ ಪಕ್ಷವು ಚೀನಾಕ್ಕೆ ಮಿಶ್ರ ಸಂದೇಶಗಳನ್ನು ನೀಡುತ್ತಿದೆ ಎಂದು ಅದು ಹೇಳಿದೆ.
‘‘ಈ ಮುಚ್ಚಿದ ಬಾಗಿಲ ಸಭೆಗಳಲ್ಲಿ ಏನು ನಡೆಯಿತು ಎಂಬುದನ್ನು ಬಿಜೆಪಿ ಮತ್ತು ಪ್ರಧಾನಿ ಜನರಿಗೆ ತಿಳಿಸಬೇಕು ಎಂದು ಕಾಂಗ್ರೆಸ್ ನಿರೀಕ್ಷಿಸುತ್ತದೆ. ಈ ವಿಷಯದಲ್ಲಿ ಅವರು ಸಂಪೂರ್ಣ ಉತ್ತರದಾಯಿತ್ವ ವಹಿಸಿಕೊಳ್ಳಬೇಕು ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು’’ ಎಂದು ಪವನ್ ಖೇರಾ ಹೇಳಿದರು. ಭಾರತೀಯ ಹಿತಾಸಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳಲಾಗಿದೆಯೇ ಎಂಬುದಾಗಿ ಅವರು ಪ್ರಶ್ನಿಸಿದರು.