×
Ad

ಮಹಂತ ನರೇಂದ್ರ ಪ್ರಸಾದ್ ಗಿರಿ ಆತ್ಮಹತ್ಯೆ ಪ್ರಕರಣ | ಪ್ರಮುಖ ಆರೋಪಿಗೆ ಜಾಮೀನು

Update: 2026-01-14 22:20 IST

ಮಹಂತ ನರೇಂದ್ರ ಪ್ರಸಾದ್ ಗಿರಿ |  Photo Credit : PTI  

ಹೊಸದಿಲ್ಲಿ, ಜ.14: ಅಖಿಲ ಭಾರತೀಯ ಆಖಾಡ ಪರಿಷತ್‌ನ ವರಿಷ್ಠ ಮಹಂತ ನರೇಂದ್ರ ಗಿರಿ ಅವರ ಸಾವಿನ ಪ್ರಕರಣದ ಪ್ರಮುಖ ಆರೋಪಿ ಆದ್ಯ ಪ್ರಸಾದ್ ತಿವಾರಿಗೆ ಸುಪ್ರೀಂಕೋರ್ಟ್ ಬುಧವಾರ ಜಾಮೀನು ನೀಡಿದೆ.

ಭಾರೀ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣದ ವಿಚಾರಣೆ ಪೂರ್ಣಗೊಳ್ಳಲು ಹೆಚ್ಚಿನ ಸಮಯ ಬೇಕಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಭಾರತದ ಅತಿ ದೊಡ್ಡ ಸಾಧು–ಸಂತರ ಸಂಘಟನೆಯಾದ ಅಖಿಲ ಭಾರತೀಯ ಆಖಾಡ ಪರಿಷತ್‌ನ ಅಧ್ಯಕ್ಷರಾಗಿದ್ದ ನರೇಂದ್ರ ಗಿರಿ ಅವರ ಮೃತದೇಹವು 2021ರ ಅಕ್ಟೋಬರ್‌ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ತಮ್ಮ ಪರಿತ್ಯಕ್ತ ಶಿಷ್ಯ ಆನಂದ್‌ ಗಿರಿ, ಆರ್ಚಕ ಆದ್ಯ ಪ್ರಸಾದ್ ತಿವಾರಿ ಹಾಗೂ ಆತನ ಪುತ್ರ ಸಂದೀಪ್ ತಿವಾರಿಯಿಂದ ನರೇಂದ್ರ ಗಿರಿ ಅವರು ತೀವ್ರ ಮಾನಸಿಕ ಯಾತನೆ ಅನುಭವಿಸಿದ್ದರು. ಸಮಾಜದ ಕಣ್ಣಲ್ಲಿ ಕಳಂಕಿತ ಹಾಗೂ ಅಪಮಾನಕ್ಕೊಳಗಾಗುವುದನ್ನು ತಪ್ಪಿಸಲು ಅವರು ಸಾವಿಗೆ ಶರಣಾಗಿದ್ದಾರೆ ಎಂದು ಸಿಬಿಐ 2021ರ ನವೆಂಬರ್‌ ನಲ್ಲಿ ಸಲ್ಲಿಸಿದ ದೋಷಾರೋಪಪಟ್ಟಿಯಲ್ಲಿ ತಿಳಿಸಿತ್ತು.

ಆರೋಪಿ ಆದ್ಯ ಪ್ರಸಾದ್ ತಿವಾರಿಗೆ ಜಾಮೀನು ನಿರಾಕರಿಸಿದ್ದ ಅಲಹಾಬಾದ್ ಹೈಕೋರ್ಟ್‌ನ ಅಕ್ಟೋಬರ್ 14, 2025ರ ಆದೇಶವನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಹಾಗೂ ಸತೀಶ್ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠವು ಜಾಮೀನು ಮಂಜೂರು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಸುಮಾರು 150 ಸಾಕ್ಷಿಗಳ ವಿಚಾರಣೆ ನಡೆಸಬೇಕಾಗಿದ್ದ ಸಿಬಿಐ ಈವರೆಗೆ ಕೇವಲ ಮೂವರನ್ನಷ್ಟೇ ವಿಚಾರಣೆ ನಡೆಸಿದೆ. ಆದ್ದರಿಂದ ನಿಕಟ ಭವಿಷ್ಯದಲ್ಲಿ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆ ತೀರಾ ವಿರಳ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ತನಿಖೆಯ ಸಂದರ್ಭದಲ್ಲಿ ಸಿಬಿಐ, ಮಹಂತ ನರೇಂದ್ರ ಗಿರಿ ಅವರು ಸಾವಿಗೆ ಮುನ್ನ ಸ್ವತಃ ಚಿತ್ರೀಕರಿಸಿದ್ದ ವೀಡಿಯೊವೊಂದನ್ನು ವಶಪಡಿಸಿಕೊಂಡಿತ್ತು. ಅದರಲ್ಲಿ, ತಾವು ಮಹಿಳೆಯೊಬ್ಬರೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇರುವಂತೆ ಎಡಿಟ್ ಮಾಡಲಾದ ವೀಡಿಯೊವನ್ನು ಆನಂದ್‌ ಗಿರಿ ಬಿಡುಗಡೆಗೊಳಿಸಲಿದ್ದಾನೆ ಎಂದು ನರೇಂದ್ರ ಗಿರಿ ಅವರು ಖಿನ್ನತೆ ವ್ಯಕ್ತಪಡಿಸಿದ್ದರು.

ಆರೋಪಿಗಳಾದ ಅಲಹಾಬಾದ್‌ನ ಬಡೆ ಹನುಮಾನ್ ಮಂದಿರದ ಆರ್ಚಕ ಆನಂದ್‌ ಗಿರಿ, ಆದ್ಯ ಪ್ರಸಾದ್ ತಿವಾರಿ ಹಾಗೂ ಸಂದೀಪ್ ತಿವಾರಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕ್ರಿಮಿನಲ್ ಸಂಚಿನ ಆರೋಪಗಳನ್ನು ಹೊರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News