×
Ad

ಶಬರಿಮಲೆ ದೇವಸ್ಥಾನದಲ್ಲಿ ‘ಅಡಿಯ ಶಿಷ್ಟಂ ತುಪ್ಪ’ ಮಾರಾಟದಲ್ಲಿ ಅಕ್ರಮ; ತನಿಖೆಗೆ ಕೇರಳ ಹೈಕೋರ್ಟ್ ಆದೇಶ

Update: 2026-01-14 22:10 IST

ಶಬರಿಮಲೆ ದೇವಸ್ಥಾನ | Photo Credit : PTI

ಕೊಚ್ಚಿ, ಜ. 14: ಶಬರಿಮಲೆ ದೇವಸ್ಥಾನದಲ್ಲಿ ‘ಅಡಿಯ ಶಿಷ್ಟಂ ತುಪ್ಪ’ (ತುಪ್ಪಾಭಿಷೇಕ ಸಲ್ಲಿಸಿದ ನಂತರ ಉಳಿದ ತುಪ್ಪ) ಮಾರಾಟದಿಂದ ಬಂದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಕುರಿತು ಜಾಗೃತ ದಳದ ತನಿಖೆಗೆ ಕೇರಳ ಉಚ್ಚ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ತುಪ್ಪ ಮಾರಾಟದಿಂದ ಬಂದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ಜಾಗೃತ ದಳದಿಂದ ವಿಸ್ತೃತ ತನಿಖೆ ನಡೆಸುವಂತೆ ಕೋರಿ ಶಬರಿಮಲೆ ದೇವಸ್ಥಾನದ ವಿಶೇಷ ಆಯುಕ್ತರು ಸಲ್ಲಿಸಿದ ವರದಿಯನ್ನು ಪರಿಗಣಿಸಿ ನ್ಯಾಯಮೂರ್ತಿಗಳಾದ ವಿ. ರಾಜಾ ವಿಜಯರಾಘವನ್ ಹಾಗೂ ಕೆ.ವಿ. ಜಯಕುಮಾರ್ ಅವರ ಪೀಠ ಈ ಆದೇಶ ನೀಡಿದೆ.

2025 ನವೆಂಬರ್ 17ರಿಂದ 2026 ಡಿಸೆಂಬರ್ 26ರ ವರೆಗೆ ಹಾಗೂ 2025 ಡಿಸೆಂಬರ್ 27ರಿಂದ 2026 ಜನವರಿ 2ರ ವರೆಗಿನ ಅವಧಿಯಲ್ಲಿ ನಡೆದಿರುವ ಹಣ ದುರುಪಯೋಗ ಸುಮಾರು 35 ಲಕ್ಷ ರೂಪಾಯಿಗಳಾಗಿರಬಹುದು ಎಂದು ಉಚ್ಚ ನ್ಯಾಯಾಲಯ ಗಮನಿಸಿದೆ.

ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯ ಜಾಗೃತ ತಂಡದ ಮುಖ್ಯಸ್ಥ ಹಾಗೂ ಭದ್ರತಾ ಅಧಿಕಾರಿ ಅವರ ವರದಿಯ ಆಧಾರದಲ್ಲಿ ಸಮರ್ಥ ಅಧಿಕಾರಿಗಳ ತಂಡವನ್ನು ರೂಪಿಸಲು ಹಾಗೂ ಅಪರಾಧ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಜಾಗೃತ ತಂಡದ ನಿರ್ದೇಶಕರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಒಂದು ತಿಂಗಳ ಒಳಗೆ ಪ್ರಗತಿ ವರದಿ ಸಲ್ಲಿಸುವಂತೆ ಜಾಗೃತ ತಂಡಕ್ಕೆ ನಿರ್ದೇಶಿಸಲಾಗಿದೆ. ವ್ಯಾಪ್ತಿಗೆ ಒಳಪಡುವ ನ್ಯಾಯಾಲಯದ ಮುಂದೆ ವರದಿ ಸಲ್ಲಿಸುವ ಮುನ್ನ ಪೀಠದ ಪೂರ್ವಾನುಮತಿ ಪಡೆಯಬೇಕು ಎಂದು ಉಚ್ಚ ನ್ಯಾಯಾಲಯ ಆದೇಶಿಸಿದೆ.

ಶಬರಿಮಲೆ ದೇವಸ್ಥಾನದ ಭಾರೀ ಸಂಚಲನ ಮೂಡಿಸಿದ ಚಿನ್ನ ಕಳವು ಪ್ರಕರಣದ ಬಳಿಕ ಇನ್ನೊಂದು ಪ್ರಮುಖ ವಂಚನೆ ಪ್ರಕರಣ ಈಗ ಬೆಳಕಿಗೆ ಬಂದಿದೆ. ಈ ಬಾರಿ ದೇವಾಲಯದ ‘ಅಡಿಯ ಶಿಷ್ಟಂ ತುಪ್ಪ’ ಮಾರಾಟದಲ್ಲಿ 35 ಲಕ್ಷ ರೂ. ಅಕ್ರಮ ನಡೆದಿರುವುದು ಬಹಿರಂಗಗೊಂಡಿದೆ.

ಮುಖ್ಯ ಜಾಗೃತ ತಂಡದ ಅಧಿಕಾರಿ ಹಾಗೂ ಭದ್ರತಾ ಅಧಿಕಾರಿ 2025 ಡಿಸೆಂಬರ್ 14ರಂದು ತಪಾಸಣೆ ನಡೆಸಿದ ಸಂದರ್ಭ ಮರಮಠ ಕಟ್ಟಡದ ಕೌಂಟರ್ ಮೂಲಕ 16,628 ಪ್ಯಾಕೆಟ್ ತುಪ್ಪ ಮಾರಾಟವಾಗಿರುವುದು ಕಂಡುಬಂದಿದೆ. ಆದರೆ ಅದರ ಮೊತ್ತ ಟಿಡಿಬಿ ಖಾತೆಗೆ ಜಮೆಯಾಗದಿರುವುದು ಪತ್ತೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News