West Bengal | ಇಬ್ಬರು ನರ್ಸ್ ಗಳಿಗೆ ನಿಫಾ ವೈರಸ್ ಪಾಸಿಟಿವ್
Photo credit: timesofindia
ಕೋಲ್ಕತಾ, ಜ. 14: ಪಶ್ಚಿಮ ಬಂಗಾಳದಿಂದ ಕಳುಹಿಸಲಾದ ಬರಾಸತ್ ಆಸ್ಪತ್ರೆಯ ಇಬ್ಬರು ನರ್ಸ್ ಗಳ ಮಾದರಿಗಳಲ್ಲಿ ನಿಫಾ ವೈರಸ್ ಇರುವುದನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ವರದಿ ದೃಢಪಡಿಸಿದೆ.
ಇದಕ್ಕೂ ಮುನ್ನ ಈ ಇಬ್ಬರು ನರ್ಸ್ ಗಳ ಮಾದರಿಗಳು ನಿಫಾ ವೈರಸ್ ಪಾಸಿಟಿವ್ ಆಗಿವೆ ಎಂಬುದು ಏಮ್ಸ್ ಕಲ್ಯಾಣಿಯ ವರದಿಯಲ್ಲಿ ತಿಳಿದುಬಂದಿತ್ತು. ನಂತರ ಮರುದೃಢೀಕರಣಕ್ಕಾಗಿ ಅವರ ಮಾದರಿಗಳನ್ನು ಪುಣೆಗೆ ಕಳುಹಿಸಲಾಗಿತ್ತು.
ಪ್ರಸ್ತುತ ಇಬ್ಬರು ನರ್ಸ್‌ಗಳು ತಾವು ಕೆಲಸ ಮಾಡುತ್ತಿರುವ ಬರಾಸತ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ಈ ಇಬ್ಬರು ನರ್ಸ್ ಗಳ ನಿಕಟ ಸಂಪರ್ಕಕ್ಕೆ ಬಂದ 120ಕ್ಕೂ ಅಧಿಕ ಜನರನ್ನು ಆರೋಗ್ಯ ಇಲಾಖೆ ಗುರುತಿಸಿದೆ. ನಿಫಾ ವೈರಸ್ ಪಾಸಿಟಿವ್ ದೃಢಪಟ್ಟ ಇಬ್ಬರು ನರ್ಸ್ ಗಳಲ್ಲಿ ಒಬ್ಬರು ಮಹಿಳೆ ಹಾಗೂ ಮತ್ತೊಬ್ಬರು ಪುರುಷರು. ನಿಕಟ ಸಂಪರ್ಕಕ್ಕೆ ಬಂದವರ ಪತ್ತೆ ಕಾರ್ಯ ಮುಂದುವರಿದಿದೆ.
ನರ್ಸ್‌ಗಳ ಕುಟುಂಬ ಸದಸ್ಯರು ಹಾಗೂ ಆರೋಗ್ಯ ಸೇವಾ ಕಾರ್ಯಕರ್ತರು ಸೇರಿದಂತೆ ಇದುವರೆಗೆ ಸಂಪರ್ಕಕ್ಕೆ ಬಂದ 120 ಮಂದಿಯನ್ನು ಗುರುತಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಇಬ್ಬರು ವೈದ್ಯರು ಸೇರಿದಂತೆ ಕತ್ವಾದ 10 ಮಂದಿ ಹಾಗೂ 8 ವೈದ್ಯರು ಸೇರಿದಂತೆ ಬರ್ದ್ವಾನದ 38 ಮಂದಿಯನ್ನು ಮನೆಯಲ್ಲೇ ಐಸೋಲೇಷನ್ ನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.