×
Ad

ಸಂಭಲ್ ಹಿಂಸಾಚಾರ | 12 ಪೊಲೀಸ್ ಅಧಿಕಾರಿಗಳ ವಿರುದ್ಧ FIR ದಾಖಲಿಸಲು ಉತ್ತರ ಪ್ರದೇಶ ನ್ಯಾಯಾಲಯ ಆದೇಶ

Update: 2026-01-14 22:10 IST

ಸಾಂದರ್ಭಿಕ ಚಿತ್ರ

ಲಕ್ನೊ, ಜ. 14: 2024ರಲ್ಲಿ ಮಸೀದಿಯೊಂದರ ಧ್ವಂಸದ ಸಂದರ್ಭ ನಡೆದ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದಲ್ಲಿ 12 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶದ ಸಂಭಲ್ ಜಿಲ್ಲೆಯ ನ್ಯಾಯಾಲಯವೊಂದು ಆದೇಶಿಸಿದೆ.

ಈ ಪ್ರಕರಣದ ಆರೋಪಿಗಳಲ್ಲಿ ಸಂಭಲ್‌ನ ಮಾಜಿ ಸರ್ಕಲ್ ಅಧಿಕಾರಿ ಅನುಜ್ ಜೌಧರಿ, ಸಂಭಲ್ ಕೊಟ್ವಾಲಿಯ ಮಾಜಿ ಉಸ್ತುವಾರಿ ಅನುಜ್ ತೋಮರ್ ಅವರಂತಹ ಹಿರಿಯ ಅಧಿಕಾರಿಗಳು ಸೇರಿದ್ದಾರೆ.

ಯಾಮೀನ್ ಅವರು ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನಂತರ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ವಿಭಾಂಶು ಸುಧೀರ್ ಅವರು ಜನವರಿ 9ರಂದು ಈ ಆದೇಶ ನೀಡಿದ್ದಾರೆ. ಹಿಂಸಾಚಾರದ ಸಂದರ್ಭ ಪೊಲೀಸರು ಹಾರಿಸಿದ ಗುಂಡಿಗೆ ಯಾಮೀನ್ ಅವರ ಪುತ್ರ ಗಾಯಗೊಂಡಿದ್ದರು ಎಂದು ಹೇಳಲಾಗಿದೆ.

2024 ನವೆಂಬರ್ 24ರಂದು ಶಾಹಿ ಜಾಮಾ ಮಸೀದಿ ಪ್ರದೇಶದ ಸಮೀಪ ನಡೆದ ಹಿಂಸಾಚಾರದ ವೇಳೆ ತನ್ನ 24 ವರ್ಷದ ಪುತ್ರ ಆಲಂ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಸಂಭಲ್‌ ನ ಖಗ್ಗು ಸರಾಯಿ ಅಂಜುಮಾನ್ ಪ್ರದೇಶದ ನಿವಾಸಿ ಯಾಮೀನ್ ಆರೋಪಿಸಿದ್ದಾರೆ.

ಪೊಲೀಸರು ಆಲಂ ಮೇಲೆ ಗುಂಡು ಹಾರಿಸುವ ಸಂದರ್ಭ ಆಲಂ ಮಸೀದಿಯ ಸಮೀಪ ರಸ್ಕ್ ಹಾಗೂ ಬಿಸ್ಕಿಟುಗಳನ್ನು ಮಾರಾಟ ಮಾಡುತ್ತಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶದಂತೆ 2024 ನವೆಂಬರ್ 24ರಂದು ಬೆಳಗ್ಗೆ ಶಾಹಿ ಜಾಮಾ ಮಸೀದಿಯ ಸಮೀಕ್ಷೆ ನಡೆಸುತ್ತಿದ್ದ ಸಂದರ್ಭ ಪೊಲೀಸರು ಪ್ರತಿಭಟನಕಾರರ ಮೇಲೆ ಹಾರಿಸಿದ ಗುಂಡಿನಿಂದ ಐವರು ಸಾವನ್ನಪ್ಪಿದ್ದರು ಹಾಗೂ ಇತರ ಹಲವರು ಗಾಯಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News