×
Ad

ಆರೆಸ್ಸೆಸ್‌ನ ಶತಾಬ್ದಿ ಕಾರ್ಯಕ್ರಮಕ್ಕೆ ಸಿಜೆಐ ಬಿ.ಆರ್.ಗವಾಯಿ ತಾಯಿಗೆ ಆಹ್ವಾನ : ವಿವಾದ ಸೃಷ್ಟಿ

Update: 2025-09-30 19:29 IST

PC | PTI

ಮುಂಬೈ,ಸೆ.30 : ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಅ.5ರಂದು ಆಯೋಜಿಸಲಾಗಿರುವ ಆರೆಸ್ಸೆಸ್‌ನ ವಿಜಯ ದಶಮಿ ಮತ್ತು ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ಬಿ.ಆರ್.ಗವಾಯಿ ಅವರ ತಾಯಿ ಕಮಲಾತಾಯಿ ಭಾಗವಹಿಸಲಿದ್ದಾರೆಯೇ ಎಂಬ ಕುರಿತು ವಿವಾದವೊಂದು ಸೃಷ್ಟಿಯಾಗಿದೆ.

ಆರೆಸ್ಸೆಸ್ ಅಮರಾವತಿಯ ಕಿರಣ ನಗರ ಪ್ರದೇಶದಲ್ಲಿಯ ಶ್ರೀಮತಿ ನರಸಮ್ಮ ಮಹಾವಿದ್ಯಾಲಯ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ರಾಜ್ಯಪಾಲ ದಿ.ಆರ್.ಎಸ್.ಗವಾಯಿ ಅವರ ಪತ್ನಿ ಡಾ.ಕಮಲಾತಾಯಿ ಗವಾಯಿ ಅವರನ್ನು ಆಹ್ವಾನಿಸಿತ್ತೆಂದು ವರದಿಯಾಗಿದೆ.

ಅ.2ರಂದು ನಾಗ್ಪುರದಲ್ಲಿಯ ಪ್ರಧಾನ ಕಚೇರಿಯಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ವಿಜಯ ದಶಮಿ ಭಾಷಣದೊಂದಿಗೆ ಆರಂಭಗೊಳ್ಳಲಿರುವ ಶತಮಾನೋತ್ಸವ ಆಚರಣೆಯು ದೇಶಾದ್ಯಂತ ಒಂದು ಲಕ್ಷಕ್ಕೂ ಅಧಿಕ ಹಿಂದು ಸಮ್ಮೇಳನಗಳು ಮತ್ತು ಸಾವಿರಾರು ವಿಚಾರ ಸಂಕಿರಣಗಳನ್ನು ಒಳಗೊಂಡಿರಲಿದೆ.

ಆರೆಸ್ಸೆಸ್ ವಿತರಿಸಿರುವ ಆಹ್ವಾನ ಪತ್ರಿಕೆಯಲ್ಲಿ ಕಮಲಾತಾಯಿ ಗವಾಯಿ ಅವರ ಹೆಸರು ಕಾಣಿಸಿಕೊಂಡಿತ್ತು. ದಲಿತ, ಪ್ರಗತಿಪರ ಮತ್ತು ಜಾತ್ಯತೀತ ಗುಂಪುಗಳಿಂದ ಟೀಕೆಗಳು ವ್ಯಕ್ತವಾದ ಬಳಿಕ ಮುಖ್ಯ ನ್ಯಾಯಾಧೀಶರ ಒಪ್ಪಿಗೆ ಪಡೆಯದೆ ಅವರ ತಾಯಿಯ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಪತ್ರದಲ್ಲಿ ಕಮಲಾತಾಯಿ ಅಂಬೇಡ್ಕರ್ ವಾದಿಯಾಗಿದ್ದು, ಅವರು ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಲಾಗಿದೆ.

ನಂತರ ಕಮಲಾತಾಯಿಯವರ ಇನ್ನೋರ್ವ ಪುತ್ರ ರಾಜೇಂದ್ರ ಗವಾಯಿ ಅವರು ವೀಡಿಯೊವೊಂದನ್ನು ಬಿಡುಗಡೆಗೊಳಿಸಿ ಅದರಲ್ಲಿ ತನ್ನ ತಾಯಿ ಅ.5ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದು ವಿವಾದವನ್ನು ಇನ್ನಷ್ಟು ತೀವ್ರಗೊಳಿಸಿದೆ. ಗವಾಯಿ ಕುಟುಂಬವು ಎಲ್ಲ ಪಕ್ಷಗಳು ಮತ್ತು ಸಿದ್ಧಾಂತಗಳೊಂದಿಗೆ ಸಂಬಂಧಗಳನ್ನು ಉಳಿಸಿಕೊಂಡಿದೆ, ಆದರೆ ಅವುಗಳೊಂದಿಗೆ ತಾವು ಗುರುತಿಸಿಕೊಂಡಿದ್ದೇವೆ ಎನ್ನುವುದು ಅದರ ಅರ್ಥವಲ್ಲ ಎಂದು ರಾಜೇಂದ್ರ ಗವಾಯಿ ವೀಡಿಯೊ ಸಂದೇಶದಲ್ಲಿ ಹೇಳಿದ್ದರು.

ಅ.2ರಂದು ನಾಗ್ಪುರದಲ್ಲಿ ನಡೆಯಲಿರುವ ಆರೆಸ್ಸೆಸ್‌ನ ಮುಖ್ಯ ಕಾರ್ಯಕ್ರಮದಿಂದ ಪ್ರತ್ಯೇಕವಾಗಿರುವ ಅಮರಾವತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನವನ್ನು ತನ್ನ ತಾಯಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿರುವ ರಾಜೇಂದ್ರ ಗವಾಯಿ, ‘ವೈಯಕ್ತಿಕ ಸಂಬಂಧಗಳು ಮತ್ತು ರಾಜಕೀಯ ಸಂಬಂಧಗಳು ಎರಡು ವಿಭಿನ್ನ ವಿಷಯಗಳಾಗಿವೆ. ಅದರರ್ಥ ನಮ್ಮ ಅಂಬೇಡ್ಕರ್ ಸಿದ್ಧಾಂತವನ್ನು ಬಿಟ್ಟು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಹಾಜರಾಗುವುದು ಎಂದಲ್ಲ. ಇದು ಹಾಗಲ್ಲ,ನಾವು ನಮ್ಮ ಸಿದ್ಧಾಂತದಲ್ಲಿ ದೃಢವಾದ ನಂಬಿಕೆಯನ್ನು ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

ಈ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅವರು ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತಂದೆ ಗಂಗಾಧರ ಫಡ್ನವೀಸ್ ಸೇರಿದಂತೆ ನಾಯಕರೊಂದಿಗಿನ ತನ್ನ ಕುಟುಂಬದ ಸಂಬಂಧಗಳನ್ನು ಉಲ್ಲೇಖಿಸಿದ್ದಾರೆ.

‘ಇಂದಿರಾ ಗಾಂಧಿಯವರು ನನ್ನ ತಂದೆ ಆರ್.ಎಸ್.ಗವಾಯಿ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡುವುದಾಗಿ ಹೇಳಿದ್ದರು, ಆದರೆ ತನ್ನ ಅಂಬೇಡ್ಕರ್ ಸಿದ್ಧಾಂತವನ್ನು ತೊರೆದು ಕಾಂಗ್ರೆಸ್ಗೆ ಸೇರಲು ಅವರು ನಿರಾಕರಿಸಿದ್ದರು. ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಲೋಕಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು,ಆದರೆ ಅದೇ ಕಾರಣದಿಂದ ನಾನು ನಿರಾಕರಿಸಿದ್ದೆ ’ಎಂದು ರಾಜೇಂದ್ರ ಗವಾಯಿ ತಿಳಿಸಿದ್ದಾರೆ.

ತನ್ನ ಸೋದರ ಭಾರತದ ಮುಖ್ಯ ನ್ಯಾಯಾಧೀಶ ಹುದ್ದೆಗೆ ಏರಿದ್ದರಿಂದ ಅಸಮಾಧಾನಗೊಂಡ ಕೆಲವರು ತನ್ನ ಕುಟುಂಬದ ಕುರಿತು ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದಾರೆ ಎಂದು ಹೇಳಿರುವ ಅವರು,‘ಗವಾಯಿ ಕುಟುಂಬವು ಪ್ರತಿಯೊಬ್ಬ ವ್ಯಕ್ತಿಯನ್ನು,ಅವರು ವಿಭಿನ್ನ ಸಿದ್ಧಾಂತಕ್ಕೆ ಸೇರಿದ್ದರೂ,ಗೌರವಿಸಿದೆ. ನಾವು ಎಲ್ಲ ಧರ್ಮಗಳನ್ನು ಗೌರವಿಸುತ್ತೇವೆ’ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News