×
Ad

ಪಾದಚಾರಿಯನ್ನು ಬಲಿ ಪಡೆದ ರೈಲಿನಿಂದ ಎಸೆದ ತೆಂಗಿನ ಕಾಯಿ!

Update: 2025-09-29 15:32 IST

ಸಾಂದರ್ಭಿಕ ಚಿತ್ರ

ಥಾಣೆ/ಪಾಲ್ಘರ್: ಥಾಣೆ ಹಾಗೂ ಪಾಲ್ಘರ್ ಜಿಲ್ಲೆಯನ್ನು ಸಂಪರ್ಕಿಸುವ ಸೇತುವೆಯ ಮೇಲೆ ಹಾದು ಹೋಗುತ್ತಿದ್ದ ರೈಲಿನಿಂದ ಪ್ರಯಾಣಿಕರೊಬ್ಬರು ಎಸೆದ ತೆಂಗಿನ ಕಾಯಿ ಬಡಿದು ಪಂಜು ದ್ವೀಪದ 27 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.

ಮೃತ ಯುವಕನನ್ನು ಸಂಜಯ್ ದತ್ತಾರಾಂ ಎಂದು ಗುರುತಿಸಲಾಗಿದೆ. ಆತ ಪಂಜು ದ್ವೀಪವನ್ನು ತಲುಪಲು ರೈಲ್ವೆ ಸೇತುವೆ ಮೇಲೆ ನಡೆದುಕೊಂಡು ಹೋಗುವಾಗ ತೆಂಗಿನ ಕಾಯಿಯನ್ನು ಆತನತ್ತ ಎಸೆಯಲಾಗಿದೆ ಎಂದು ಹೇಳಲಾಗಿದೆ.

ಪಶ್ಚಿಮ ಮುಂಬೈ ಉಪನಗರದ ಪಂಜು ದ್ವೀಪದ ವಸಾಯಿ ತೊರೆಯ ಮೂಲಕ ಈ ರೈಲು ಸೇತುವೆ ಹಾದು ಹೋಗಲಿದ್ದು, ಇಲ್ಲಿ ಯಾವುದೇ ರಸ್ತೆ ಸಂಪರ್ಕವಿಲ್ಲ. ಪವಿತ್ರ ಪುಷ್ಪಾರ್ಚನೆಯ ಭಾಗವಾಗಿ ತೆಂಗಿನ ಕಾಯಿಯನ್ನು ತೊರೆಗೆ ಎಸೆಯಲಾಗುತ್ತದೆ. ಈ ಸಂಪ್ರದಾಯವನ್ನು ʼನಿರ್ಮಲ್ಯʼ ಎಂದು ಕರೆಯಲಾಗುತ್ತದೆ. ಬಹುತೇಕ ಪ್ರಯಾಣಿಕರು ಈ ತೊರೆಯನ್ನು ಚಲಿಸುವ ರೈಲಿನ ಮೂಲಕ ಹಾದು ಹೋಗುವಾಗ, ಪೇಪರ್ ಅಥವಾ ಪ್ಲಾಸ್ಟಿಕ್ ಬ್ಯಾಗ್ ಗಳ ಮೂಲಕ ‘ನಿರ್ಮಲ್ಯ’ವನ್ನು ತೊರೆಗೆ ಎಸೆಯುತ್ತಾರೆ. ಈ ಸಂಪ್ರದಾಯದ ಭಾಗವಾಗಿ ಶನಿವಾರ ಬೆಳಗ್ಗೆ ಕೂಡಾ ರೈಲಿನಿಂದ ತೊರೆಯತ್ತ ತೆಂಗಿನ ಕಾಯಿ ಎಸೆಯಲಾಗಿದೆ ಎನ್ನಲಾಗಿದೆ.

ಈ ಸಂಬಂಧ ವಸಾಯಿ ಸರಕಾರಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತೆಂಗಿನ ಕಾಯಿಯನ್ನು ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಲು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News