ಮಣಿಪುರದ ಪ್ರಭಾರ ಮುಖ್ಯ ನ್ಯಾಯಾಧೀಶರ ವರ್ಗಾವಣೆಗೆ ಕೊಲಿಜಿಯಂ ಶಿಫಾರಸು
Photo : barandbench
ಹೊಸದಿಲ್ಲಿ: ಮಣಿಪುರ ಉಚ್ಚ ನ್ಯಾಯಾಲಯದ ಪ್ರಭಾರ ಮುಖ್ಯ ನ್ಯಾಯಾಧೀಶ ಎಂ.ವಿ.ಮುರಳೀಧರನ್ ಅವರನ್ನು ಕಲ್ಕತ್ತಾ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಶಿಫಾರಸು ಮಾಡಿದೆ.
ಕೊಲಿಜಿಯಂ ‘ನ್ಯಾಯದ ಉತ್ತಮ ಆಡಳಿತ ’ಕ್ಕಾಗಿ ಅ.9ರಂದು ನ್ಯಾ.ಮುರಳೀಧರನ್ ವರ್ಗಾವಣೆಯನ್ನು ಪ್ರಸ್ತಾವಿಸಿತ್ತು. ಮಂಗಳವಾರ ನ್ಯಾ.ಮುರಳೀಧರನ್ ಅವರು ತನ್ನನ್ನು ತನ್ನ ಮಾತೃ ಉಚ್ಚ ನ್ಯಾಯಾಲಯವಾದ ಮದ್ರಾಸ್ ಹೈಕೋರ್ಟ್ ಗೆ ವರ್ಗಾಯಿಸುವಂತೆ ಅಥವಾ ಮಣಿಪುರ ಉಚ್ಚ ನ್ಯಾಯಾಲಯದಲ್ಲಿಯೇ ಮುಂದುವರಿಯಲು ಅವಕಾಶ ನೀಡುವಂತೆ ಕೋರಿಕೊಂಡಿದ್ದರು.
ಆದರೆ ನ್ಯಾ.ಮುರಳೀಧರನ್ ಅವರ ಅರ್ಜಿಯಲ್ಲಿ ಯಾವುದೇ ಅರ್ಹತೆ ತನಗೆ ಕಂಡು ಬಂದಿಲ್ಲ ಎಂದು ಬುಧವಾರ ಹೇಳಿದ ಕೊಲಿಜಿಯಂ,ಕಲಕತ್ತಾ ಉಚ್ಚ ನ್ಯಾಯಾಲಯಕ್ಕೆ ಅವರ ವರ್ಗಾವಣೆಯ ತನ್ನ ಶಿಫಾರಸನ್ನು ಪುನರುಚ್ಚರಿಸಿದೆ.
ಎ.19ರಂದು ನ್ಯಾ.ಮುರಳೀಧರನ್ ಅವರು ರಾಜ್ಯದ ಬಹುಸಂಖ್ಯಾತ ಮೈತೈ ಸಮುದಾಯವನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸಲು ಕೋರಿರುವ ಅರ್ಜಿಗಳನ್ನು ಪರಿಗಣಿಸುವಂತೆ ಮತ್ತು ಅವುಗಳ ಕುರಿತು ತ್ವರಿತ ನಿರ್ಣಯವನ್ನು ಕೈಗೊಳ್ಳುವಂತೆ ಮಣಿಪುರ ಸರಕಾರಕ್ಕೆ ಸೂಚಿಸಿದ್ದರು.
ಈ ಆದೇಶವು ಮೈತೈ ಮತ್ತು ಕುಕಿ ಸಮುದಾಯಗಳ ನಡುವಿನ ಹಳೆಯ ಆತಂಕಗಳನ್ನು ಪುನರುಜ್ಜೀವನಗೊಳಿಸಿತ್ತು. ಮೇ 3ರಂದು ಮೈತೈ ಸಮುದಾಯದ ಬೇಡಿಕೆಯ ವಿರುದ್ಧ ಆಯೋಜಿಸಲಾಗಿದ್ದ ಪ್ರತಿಭಟನಾ ಜಾಥಾದಲ್ಲಿ ಸಾವಿರಾರು ಜನರು ಭಾಗವಹಿಸಿದ ಬಳಿಕ ಭಾರೀ ಪ್ರಮಾಣದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಜನಾಂಗೀಯ ಸಂಘರ್ಷ ಆರಂಭಗೊಂಡಾಗಿನಿಂದ ರಾಜ್ಯದಲ್ಲಿ 200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
ಒಂದು ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ಪರಿಗಣಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನವನ್ನು ನೀಡುವ ಅಧಿಕಾರವನ್ನು ಮಣಿಪುರ ಉಚ್ಚ ನ್ಯಾಯಾಲಯವು ಹೊಂದಿಲ್ಲ ಎಂದು ಮೇ 9ರಂದು ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ ಸರ್ವೋಚ್ಚ ನ್ಯಾಯಾಲಯವು,ತನ್ನ ಹಲವಾರು ತೀರ್ಪುಗಳು ಇದನ್ನು ವಿಷದಪಡಿಸಿವೆ ಎಂದು ಹೇಳಿತ್ತು.