ಗಣರಾಜ್ಯೋತ್ಸವ 2026| ಆಪರೇಷನ್ ಸಿಂಧೂರ್ ಕುರಿತು ದೇಶಕ್ಕೆ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಶಿಗೆ ವಿಶಿಷ್ಟ ಸೇವಾ ಪದಕ
ಕರ್ನಲ್ ಸೋಫಿಯಾ ಖುರೇಶಿ ( PC : PTI)
ಹೊಸದಿಲ್ಲಿ, ಜ.26: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಳೆದ ವರ್ಷ ಭಾರತ ಕೈಗೊಂಡ ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ದೇಶಕ್ಕೆ ನಿರಂತರ ಮಾಹಿತಿ ನೀಡಿದ ಭಾರತೀಯ ಸೇನೆಯ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರಿಗೆ 2026ರ ಗಣರಾಜ್ಯೋತ್ಸವದ ಗೌರವ ಪಟ್ಟಿಯಲ್ಲಿ ವಿಶಿಷ್ಟ ಸೇವಾ ಪದಕ ಪ್ರದಾನ ಮಾಡಲಾಗಿದೆ.
ಆಪರೇಷನ್ ಸಿಂಧೂರ್ ವೇಳೆ ಸಶಸ್ತ್ರ ಪಡೆಗಳು ನಡೆಸಿದ ದಾಳಿಗಳ ದೈನಂದಿನ ವಿವರಗಳನ್ನು ಮಾಧ್ಯಮಗಳ ಮೂಲಕ ರಾಷ್ಟ್ರಕ್ಕೆ ತಿಳಿಸುವ ಜವಾಬ್ದಾರಿಯನ್ನು ಕರ್ನಲ್ ಖುರೇಷಿ ವಹಿಸಿದ್ದರು. ಈ ವೇಳೆ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರೂ ಉಪಸ್ಥಿತರಿದ್ದರು.
ಭಾರತೀಯ ಸೇನೆಯ ಸಿಗ್ನಲ್ಸ್ ಕಾರ್ಪ್ಸ್‌ನ ಅಧಿಕಾರಿಯಾಗಿರುವ ಕರ್ನಲ್ ಸೋಫಿಯಾ ಖುರೇಷಿ, ಕಿರಿಯ ವಯಸ್ಸಿನಲ್ಲೇ ಹಲವು ಸಾಧನೆಗಳನ್ನು ಮಾಡಿದ್ದಾರೆ. ಮಾರ್ಚ್ 2016ರಲ್ಲಿ ಅವರು ಬಹುರಾಷ್ಟ್ರೀಯ ಮಿಲಿಟರಿ ಅಭ್ಯಾಸದ ವೇಳೆ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಏಪ್ರಿಲ್ 2025ರಲ್ಲಿ ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಸಶಸ್ತ್ರ ಪಡೆಗಳು ಕೈಗೊಂಡ ಕಾರ್ಯಾಚರಣೆಗಳ ವೇಳೆ, ಕರ್ನಲ್ ಖುರೇಷಿ ಸೇನೆಯ ಪ್ರಮುಖರಲ್ಲಿ ಒಬ್ಬರಾಗಿದ್ದರು. ಪತ್ರಿಕಾಗೋಷ್ಠಿಗಳಲ್ಲಿ ಅವರು ಕಾರ್ಯಾಚರಣೆಗಳ ಸ್ವರೂಪ, ಭಾರತದ ಸೈನಿಕ ಸಾಮರ್ಥ್ಯ ಮತ್ತು ಸಾಧನೆಗಳ ಕುರಿತು ನಿಖರ ಮಾಹಿತಿ ನೀಡಿದ್ದರು.
ಇದಕ್ಕೂ ಮೊದಲು, ಡಿಸೆಂಬರ್ 2001ರಲ್ಲಿ ನಡೆದ ಭಾರತೀಯ ಸಂಸತ್ತಿನ ದಾಳಿಯ ನಂತರ ಪಂಜಾಬ್ ಗಡಿಯಲ್ಲಿ ಕೈಗೊಳ್ಳಲಾದ ಆಪರೇಷನ್ ಪರಾಕ್ರಮ್ ಸಂದರ್ಭದಲ್ಲೂ ಕರ್ನಲ್ ಖುರೇಷಿ ಪ್ರಮುಖ ಪಾತ್ರ ವಹಿಸಿದ್ದರು.