×
Ad

ಹಿಮಾಚಲ ಪ್ರದೇಶ: ಕುಲು–ಮನಾಲಿಯಲ್ಲಿ ಸಂಚಾರ ದುಸ್ತರ; 10 ಗಂಟೆಗಳಲ್ಲಿ ಕೇವಲ 15 ಕಿ.ಮೀ ಪ್ರಯಾಣ

Update: 2026-01-26 08:30 IST

PC: x.com/timesofindia

ಕುಲು/ಮನಾಲಿ: ಪ್ರಸಿದ್ಧ ಪ್ರವಾಸಿತಾಣಗಳಾದ ಕುಲು ಹಾಗೂ ಮನಾಲಿ ಹಿಮಚ್ಛಾದಿತವಾಗಿದ್ದು, ಮೈ ಕೊರೆಯುವ ತೀವ್ರ ಚಳಿಯ ನಡುವೆ ಪ್ರವಾಸಿಗರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇವಲ 15 ಕಿಲೋಮೀಟರ್ ದೂರ ಪ್ರಯಾಣಿಸಲು 10 ಗಂಟೆಗಳಷ್ಟು ಸಮಯ ತೆಗೆದುಕೊಳ್ಳುತ್ತಿರುವುದರಿಂದ, ಪ್ರವಾಸಿಗರ ಕಾರುಗಳು ಅಕ್ಷರಶಃ ತೆವಳುವಂತಾಗಿದೆ. ಸತತ ಎರಡನೇ ದಿನವಾದ ರವಿವಾರವೂ ಸಂಚಾರ ದಟ್ಟಣೆಯಿಂದಾಗಿ ಈ ಗಿರಿಧಾಮ ಪ್ರವಾಸಿಗರ ಪಾಲಿಗೆ ದುಃಸ್ವಪ್ನವಾಗಿದೆ.

ಮನಾಲಿಯಿಂದ ಹೊರಹೋಗುವ ಬಹುತೇಕ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ದುಸ್ತರವಾಗಿದೆ. ಜಾರು ರಸ್ತೆಗಳ ಕಾರಣ ವಾಹನಗಳು ಅತೀವ ನಿಧಾನವಾಗಿ ಚಲಿಸುತ್ತಿದ್ದು, ಮನಾಲಿಯಿಂದ 15 ಕಿಲೋಮೀಟರ್ ದೂರದ ಪುಟ್ಟ ಮಾರುಕಟ್ಟೆ ನಗರ ಪಾಟಲಿಕುಹಾಲ್ ತಲುಪಲು 10 ಗಂಟೆಗಳಷ್ಟು ಸಮಯ ಬೇಕಾಗಿದೆ. ಪಾಟಲಿಕುಹಾಲ್ ಪ್ರದೇಶದಲ್ಲಿ ಮಂಜು ನಿಧಾನವಾಗಿ ಕರಗತೊಡಗಿದೆ ಎಂದು ತಿಳಿದುಬಂದಿದೆ.

ರವಿವಾರ ರಾತ್ರಿ ಸುಮಾರು 2.30ರ ವೇಳೆಗೆ, ಪ್ರವಾಸಿಗರು ಹಿಮಚ್ಛಾದಿತ ರಸ್ತೆಗಳ ಮೇಲೆ ಟ್ರಾಲಿ ಬ್ಯಾಗ್‌ಗಳನ್ನು ಎಳೆಯುತ್ತಾ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲವರು ಜಾರುತ್ತಾ, ಬೀಳುತ್ತಾ ಮತ್ತೆ ಏಳುತ್ತಾ ಸಾಗುತ್ತಿರುವ ದೃಶ್ಯಗಳು ಇದರಲ್ಲಿ ಸೆರೆಯಾಗಿದೆ.

“ಇದು ಮನಾಲಿಗೆ ತೆರಳಿದ ಪ್ರವಾಸಿಗರ ಸ್ಥಿತಿ; ಸಂಪೂರ್ಣ ಅತಂತ್ರವಾಗಿ ಅಲೆದಾಡುವಂತಾಗಿದೆ” ಎಂದು ಎಕ್ಸ್ (X) ಬಳಕೆದಾರರೊಬ್ಬರು ಬರೆದಿದ್ದಾರೆ. ನೂರಾರು ಮಂದಿ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಪಾದರಸ ಮಟ್ಟ ಶೂನ್ಯ ಡಿಗ್ರಿಗಿಂತ ಕೆಳಗೆ ಇಳಿದಿರುವುದರಿಂದ, ಬಸ್‌, ಟ್ಯಾಕ್ಸಿ ಹಾಗೂ ಕಾರುಗಳ ಸಂಚಾರ ಮತ್ತಷ್ಟು ಕಷ್ಟಕರವಾಗಿದೆ. ಮಕ್ಕಳು ಸೇರಿದಂತೆ ಹಲವರು ಕೊರೆಯುವ ಚಳಿಯಲ್ಲಿ ವಾಹನಗಳ ಒಳಗೆಯೇ ರಾತ್ರಿಯಿಡೀ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

“ಪಾಟಲಿಕುಹಾಲ್ ತಲುಪಲು ನಮಗೆ 12 ಗಂಟೆಗಳಷ್ಟು ಸಮಯ ತಗುಲಿತು. ರಾತ್ರಿಯಿಡೀ ಮೈಕೊರೆಯುವ ಚಳಿಯಲ್ಲಿ ವಾಹನದಲ್ಲೇ ಉಳಿಯಬೇಕಾಯಿತು. ಇಂತಹ ಭಯಾನಕ ಸಂಚಾರ ದಟ್ಟಣೆಯನ್ನು ನಾನು ಎಂದೂ ಕಂಡಿಲ್ಲ,” ಎಂದು ಕುಲ್ವಿಂದರ್ ಸಿಂಗ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಪ್ಪುಗಟ್ಟಿರುವ ಹಿಮವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದರೂ, ಕುಲು–ಮನಾಲಿ ನಡುವಿನ ದ್ವಿಪಥ ರಸ್ತೆಯಲ್ಲಿ ಭಾರಿ ವಾಹನಗಳ ದಟ್ಟಣೆಯಿಂದಾಗಿ ಪ್ರವಾಸಿಗರು ಇನ್ನೂ ಸಂಕಷ್ಟದಲ್ಲೇ ಸಿಲುಕಿದ್ದಾರೆ. ಶನಿವಾರ ಹಾಗೂ ರವಿವಾರ ಹವಾಮಾನದಲ್ಲಿ ಸುಧಾರಣೆ ಕಂಡುಬಂದರೂ, ರಸ್ತೆ ಸಂಚಾರ ಮಾತ್ರ ಇನ್ನೂ ಸಂಪೂರ್ಣವಾಗಿ ಸರಾಗವಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News