ಭಾರತ–ಅಮೆರಿಕ ವ್ಯಾಪಾರ ಮಾತುಕತೆ ಸ್ಥಗಿತ| ಟ್ರಂಪ್ ಆಡಳಿತದೊಳಗಿನ ಭಿನ್ನಮತ ಬಹಿರಂಗ; ಸೆನೆಟರ್ ಟೆಡ್ ಕ್ರೂಝ್ ಆಡಿಯೋ ವೈರಲ್
photo| indiatoday
ವಾಷಿಂಗ್ಟನ್, ಜ.26: ಸುಂಕ ಸಂಬಂಧಿತ ವಿವಾದದ ಹಿನ್ನೆಲೆಯಲ್ಲಿ ಭಾರತ–ಅಮೆರಿಕ ವ್ಯಾಪಾರ ಮಾತುಕತೆಗಳು ಸ್ಥಗಿತಗೊಂಡಿರುವ ನಡುವೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಆಡಳಿತದೊಳಗಿನ ಆಂತರಿಕ ಭಿನ್ನಮತಗಳು ಬಹಿರಂಗವಾಗಿವೆ. ಟೆಕ್ಸಾಸ್ ನ ರಿಪಬ್ಲಿಕನ್ ಸೆನೆಟರ್ ಟೆಡ್ ಕ್ರೂಝ್ ಅವರು ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಶ್ವೇತಭವನದ ಆರ್ಥಿಕ ಸಲಹೆಗಾರ ಪೀಟರ್ ನವರೊ, ಕೆಲವೊಮ್ಮೆ ಅಧ್ಯಕ್ಷ ಟ್ರಂಪ್ ಅವರ ವ್ಯಾಪಾರ ನೀತಿಯನ್ನು ಕುರಿತು ಟೀಕಿಸುವ ಆಡಿಯೋ ರೆಕಾರ್ಡಿಂಗ್ ವೈರಲ್ ಆಗಿದೆ.
Axios ವರದಿಯ ಪ್ರಕಾರ, ಸುಮಾರು 10 ನಿಮಿಷಗಳ ಈ ಆಡಿಯೋವನ್ನು ರಿಪಬ್ಲಿಕನ್ ಮೂಲವೊಂದು ಹಂಚಿಕೊಂಡಿದ್ದು, ಇದು 2025ರ ಆರಂಭ ಹಾಗೂ ಮಧ್ಯ ವರ್ಷದ ಅವಧಿಗೆ ಸೇರಿದೆ. ಖಾಸಗಿ ವ್ಯಕ್ತಿಗಳೊಂದಿಗೆ ನಡೆದ ಸಂಭಾಷಣೆಯಲ್ಲಿ ಕ್ರೂಝ್, ಉಪಾಧ್ಯಕ್ಷ ವ್ಯಾನ್ಸ್ ಅನುಸರಿಸುತ್ತಿರುವ ವ್ಯಾಪಾರ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ತಮನ್ನು ಸಾಂಪ್ರದಾಯಿಕ, ಮುಕ್ತ-ವ್ಯಾಪಾರ ಪರ ನಿಲುವು ಹೊಂದಿರುವ ರಿಪಬ್ಲಿಕನ್ ಎಂದು ಅವರು ಹೇಳಿಕೊಂಡಿದ್ದಾರೆ.
ಆಡಿಯೋದಲ್ಲಿ, ಟ್ರಂಪ್ ಅವರ ಸುಂಕ-ಕೇಂದ್ರಿತ ವ್ಯಾಪಾರ ತಂತ್ರ ಅಮೆರಿಕದ ಆರ್ಥಿಕತೆಗೆ ಹಾನಿಕಾರಕವಾಗಬಹುದು ಮತ್ತು ರಾಜಕೀಯವಾಗಿ ಗಂಭೀರ ಪರಿಣಾಮಗಳಿಗೆ ದಾರಿ ಮಾಡಿಕೊಡಬಹುದು ಎಂದು ಕ್ರೂಝ್ ಕಳವಳ ವ್ಯಕ್ತಪಡಿಸಿದ್ದಾರೆ. 2025ರ ಏಪ್ರಿಲ್‌ನಲ್ಲಿ ಸುಂಕ ಜಾರಿಗೆ ಬಂದ ಬಳಿಕ, ತಾವು ಮತ್ತು ಇತರ ಸೆನೆಟರ್‌ಗಳು ತಡರಾತ್ರಿ ಅಧ್ಯಕ್ಷರೊಂದಿಗೆ ಕರೆಯಲ್ಲಿ ಮಾತನಾಡಿ ನಿರ್ಧಾರ ಮರುಪರಿಶೀಲಿಸುವಂತೆ ಒತ್ತಾಯಿಸಿದ್ದುದನ್ನೂ ಅವರು ಉಲ್ಲೇಖಿಸಿದ್ದಾರೆ.
ಮಧ್ಯರಾತ್ರಿವರೆಗೆ ನಡೆದ ಆ ಕರೆಯ ವೇಳೆ ಟ್ರಂಪ್ ಲೆಜಿಸ್ಲೇಟರ್ ಗಳ ಮೇಲೆ ಕೋಪಗೊಂಡು ಮಾತನಾಡಿದ್ದಾರೆ. ಆ ಮಾತುಕತೆ ಸುಗಮವಾಗಿ ಮುಕ್ತಾಯವಾಗಲಿಲ್ಲ ಎಂದು ಖಾಸಗಿ ವ್ಯಕ್ತಿಗಳಿಗೆ ಕ್ರೂಝ್ ತಿಳಿಸಿದ್ದಾಗಿ Axios ವರದಿ ಹೇಳಿದೆ.
ನವೆಂಬರ್ 2026ರ ವೇಳೆಗೆ ನಿವೃತ್ತಿ ಖಾತೆಗಳ ಮೌಲ್ಯ ಶೇಕಡಾ 30ರಷ್ಟು ಕುಸಿದು, ದಿನಸಿ ಬೆಲೆಗಳು ಶೇಕಡಾ 10ರಿಂದ 20ರಷ್ಟು ಏರಿಕೆಯಾದರೆ, ರಿಪಬ್ಲಿಕನ್ ಪಕ್ಷಕ್ಕೆ ಗಂಭೀರ ಚುನಾವಣಾ ಹಿನ್ನಡೆ ಎದುರಾಗಲಿದೆ ಎಂದು ತಾವು ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದ್ದುದನ್ನೂ ಕ್ರೂಝ್ ನೆನಪಿಸಿಕೊಂಡಿದ್ದಾರೆ.
ಸುಂಕ ಜಾರಿಯನ್ನು ‘ವಿಮೋಚನಾ ದಿನ’ ಎಂದು ಆಡಳಿತ ವರ್ಣಿಸಿರುವುದನ್ನು ಕ್ರೂಝ್ ವ್ಯಂಗ್ಯವಾಡಿದ್ದಾರೆ. ಭಾರತ–ಅಮೆರಿಕ ವ್ಯಾಪಾರ ಮಾತುಕತೆಗಳ ವಿಚಾರದಲ್ಲಿ, ಒಪ್ಪಂದ ಮುಂದುವರಿಸಲು ಶ್ವೇತಭವನದೊಂದಿಗೆ ತಾವು ಹೋರಾಟ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಪ್ರಗತಿಗೆ ಅಡ್ಡಿಯಾಗುತ್ತಿರುವವರು ಯಾರು ಎಂಬ ಪ್ರಶ್ನೆಗೆ, ಪೀಟರ್ ನವರೊ, ಉಪಾಧ್ಯಕ್ಷ ವ್ಯಾನ್ಸ್ ಹಾಗೂ ಕೆಲವೊಮ್ಮೆ ಅಧ್ಯಕ್ಷ ಟ್ರಂಪ್ ಅವರೇ ಕಾರಣ ಎಂದು ಕ್ರೂಝ್ ಆಡಿಯೋದಲ್ಲಿ ತಿಳಿಸಿದ್ದಾರೆ.
ಆಡಿಯೋದಲ್ಲಿ, ಉಪಾಧ್ಯಕ್ಷ ವ್ಯಾನ್ಸ್ ಅವರು ಸಂಪ್ರದಾಯವಾದಿ ಪಾಡ್‌ಕ್ಯಾಸ್ಟರ್ ಟಕರ್ ಕಾರ್ಲ್ಸನ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವುದನ್ನೂ ಕ್ರೂಝ್ ಉಲ್ಲೇಖಿಸಿದ್ದಾರೆ. ವಿದೇಶಾಂಗ ನೀತಿ ವಿಚಾರಗಳಲ್ಲಿ ಕಾರ್ಲ್ಸನ್ ವಿರೋಧಿ ನಿಲುವು ತಾಳುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.