Rajasthan| 10,000 ಕೆಜಿ ಸ್ಫೋಟಕ ವಶ: ಓರ್ವ ಆರೋಪಿಯ ಬಂಧನ
ಜೈಪುರ: ಗಣರಾಜ್ಯೋತ್ಸವಕ್ಕೆ ಮುನ್ನಾದಿನ ರಾಜಸ್ಥಾನದ ನಾಗೌರ್ ಜಿಲ್ಲಾ ಪೊಲೀಸರು ಜಮೀನೊಂದರಿಂದ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಚಿತ ಸುಳಿವಿನ ಮೇರೆಗೆ, ಪೊಲೀಸರು ಶನಿವಾರ ತಡರಾತ್ರಿ ಹರ್ಸೌರ್ ಗ್ರಾಮದಲ್ಲಿ ದಾಳಿ ನಡೆಸಿದಾಗ ಹೊಲವೊಂದರಲ್ಲಿ 187 ಚೀಲಗಳಲ್ಲಿ ಪ್ಯಾಕ್ ಮಾಡಿಟ್ಟಿದ್ದ 9,550 ಕೆಜಿ ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ನಾಗೌರ್ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚವಾ ತಿಳಿಸಿದ್ದಾರೆ.
ಹರ್ಸೌರ್ ಗ್ರಾಮದ ನಿವಾಸಿ ಸುಲೇಮಾನ್ ಖಾನ್ ಎಂಬಾತನನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಈತನ ವಿರುದ್ಧ ಈ ಹಿಂದೆ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಅಮೋನಿಯಂ ನೈಟ್ರೇಟ್ ಜೊತೆಗೆ, ಪೊಲೀಸರು ಡಿಟೋನೇಟರ್‌ಗಳು, ಐದು ಬಂಡಲ್ ಕೆಂಪು ಫ್ಯೂಸ್ ವೈರ್ ಸೇರಿದಂತೆ ದೊಡ್ಡ ಪ್ರಮಾಣದ ಸ್ಫೋಟಕ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಅಕ್ರಮ ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಸ್ಫೋಟಕಗಳನ್ನು ಪೂರೈಸುತ್ತಿದ್ದನೆಂದು ತಿಳಿದುಬಂದಿದೆ. ಆರೋಪಿಯ ವಿರುದ್ಧ ಸ್ಫೋಟಕ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೃದುಲ್ ಕಚವಾ ಹೇಳಿದ್ದಾರೆ.