×
Ad

ಕೇರಳ | ಜ್ಯೋತಿಷಿಯೊಂದಿಗೆ ಕಮ್ಯುನಿಸ್ಟ್ ನಾಯಕನ ಫೋಟೋ ವೈರಲ್: ತೀವ್ರ ಟೀಕೆಗೆ ಗುರಿಯಾದ ಸಿಪಿಐ(ಎಂ)ನ ಎಂ.ವಿ. ಗೋವಿಂದನ್

Update: 2025-08-10 13:34 IST

ಎಂ.ವಿ. ಗೋವಿಂದನ್ (Photo credit: twentyfournews.com)

ತಿರುವನಂತಪುರಂ: ಕೇರಳ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಹಾಗೂ ಪೊಲಿಟ್‌ಬ್ಯೂರೋ ಸದಸ್ಯ ಎಂ.ವಿ. ಗೋವಿಂದನ್ ಅವರು ಪ್ರಸಿದ್ಧ ಜ್ಯೋತಿಷಿ ಮಾಧವ ಪೊದುವಾಲ್ ಅವರೊಂದಿಗೆ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗುರಿಯಾಗಿದೆ.

ಗುರುವಾರ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಪಕ್ಷದ ಕೆಲ ನಾಯಕರು, ರಹಸ್ಯವಾಗಿ ಜ್ಯೋತಿಷಿಗಳನ್ನು ಭೇಟಿ ಮಾಡಿದ ವಿಷಯ ಪ್ರಸ್ತಾಪಿಸಿದ ಬಳಿಕ, ಪಕ್ಷದೊಳಗೆಯೇ ಈ ವಿವಾದದ ಕಿಡಿ ಹಬ್ಬಿತು. ಕಣ್ಣೂರಿನ ಜ್ಯೋತಿಷಿ ಪೊದುವಾಲ್ ಅವರೊಂದಿಗಿನ ಗೋವಿಂದನ್ ಅವರ ಫೋಟೋ ವೈರಲ್ ಆಗಿದ್ದು ಗಂಭೀರ ತಿರುವು ಪಡೆದುಕೊಂಡಿತು.

ಈ ಕುರಿತು ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೋವಿಂದನ್, “ಪಕ್ಷದೊಳಗೆ ನನ್ನ ವಿರುದ್ಧ ಟೀಕೆಗಳೇನೂ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದರು.

ಜ್ಯೋತಿಷಿ ಮಾಧವ ಪೊದುವಾಲ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿ, ಗೋವಿಂದನ್ ತಮ್ಮ ದೀರ್ಘಕಾಲದ ಪರಿಚಿತರಾಗಿದ್ದು, ಈ ವರ್ಷದ ಆರಂಭದಲ್ಲಿ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಕುಟುಂಬ ಸಮೇತ ಪ್ರೀತಿಯಿಂದ ಭೇಟಿ ಮಾಡಿದ್ದರು ಎಂದು ಹೇಳಿದರು. ಅವರು ಜ್ಯೋತಿಷ್ಯ ಸಲಹೆಗಾಗಿ ಬಂದಿರಲಿಲ್ಲ; ಅದೊಂದು ಸ್ನೇಹಪರ ಭೇಟಿಯಾಗಿತ್ತು. ಯಾರೋ ಫೋಟೋ ತೆಗೆದು ವೈರಲ್ ಮಾಡಿದರು” ಎಂದು ಅವರು ವಿವರಣೆ ನೀಡಿದರು.

ಮಾಧವ ಪೊದುವಾಲ್ ಅವರು 2021ರಲ್ಲಿ ನಡೆದ ನವ ಕೇರಳ ಯಾತ್ರೆ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಉಪಾಹಾರ ಸೇವಿಸಿದ್ದನ್ನು ಉಲ್ಲೇಖಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರನ್ನು ಭೇಟಿಯಾಗಿರುವುದನ್ನೂ ಅವರು ಪ್ರಸ್ತಾಪಿಸಿದರು.

“ಕಮ್ಯುನಿಸ್ಟರು ಜ್ಯೋತಿಷಿಗಳನ್ನು ಭೇಟಿ ಮಾಡುವುದರಲ್ಲಿ ತಪ್ಪಿಲ್ಲ. ಭೇಟಿ ಮಾಡಿದರು ಎಂಬ ಕಾರಣಕ್ಕೆ ಅವರ ಸಿದ್ಧಾಂತವನ್ನು ಒಪ್ಪಿದ್ದಾರೆ ಎಂದು ಅರ್ಥವಲ್ಲ. ವೈಯುಕ್ತಿಕ ಸಲಹೆ ಕೇಳಲು ಅವರೇನು ಹೋಗಿರಲಿಲ್ಲ. ಗೋವಿಂದನ್ ಅವರು ಭೌತವಾದದ ಪ್ರತಿಪಾದಕರಾದರೂ, ಮಾನವೀಯ ಸಂಬಂಧಗಳನ್ನು ಕಾಪಾಡಿಕೊಳ್ಳುವುದು ಸಹಜ” ಎಂದು ಗೋವಿಂದನ್ ಪರವಾಗಿ ಪಕ್ಷದ ಹಿರಿಯ ನಾಯಕ ಎ.ಕೆ. ಬಾಲನ್, ನಿಲುವು ವ್ಯಕ್ತಪಡಿಸಿದರು.

2021 ರಲ್ಲಿ, ಆಗ ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರಾಗಿದ್ದ ಗೋವಿಂದನ್, ಕಾರ್ಲ್ ಮಾರ್ಕ್ಸ್ ಜೊತೆ ಸಂಬಂಧ ಹೊಂದಿದ್ದ ತಾತ್ವಿಕ ವಿಧಾನವಾದ ಆಡುಭಾಷೆಯ ಭೌತವಾದವು ಭಾರತೀಯ ಸಮಾಜಕ್ಕೆ ಪ್ರಾಯೋಗಿಕವಲ್ಲ ಎಂದು ಹೇಳಿದ್ದರು. ಇದು ಎಡಪಂಥೀಯರಲ್ಲಿ ಒಂದು ಪ್ರಮುಖ ಚರ್ಚೆಯನ್ನು ಹುಟ್ಟುಹಾಕಿತ್ತು. ಅವರು ಎಡಪಂಥೀಯರು ನಾಸ್ತಿಕರು ಹಾಗೂ ಆಸ್ತಿಕರನ್ನು ಸಮಾನವಾಗಿ ನೋಡಬೇಕು ಎಂದು ಅಭಿಪ್ರಾಯಪಟ್ಟಿದ್ದರು.

ಸಿಪಿಐ(ಎಂ) ಹಿಂದೆ ಜ್ಯೋತಿಷ್ಯಪ್ರಚಾರವನ್ನು ತೀವ್ರವಾಗಿ ವಿರೋಧಿಸಿದ್ದರೂ, ಈಗ ಪಕ್ಷದ ನಾಯಕರು ಅದನ್ನು ವೈಯಕ್ತಿಕ ಸಂಬಂಧಗಳ ನೆಲೆಯಲ್ಲಿ ಸಮರ್ಥಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. 2008ರಲ್ಲಿ, ನಾಡಿ ಜ್ಯೋತಿಷ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ)ನ ಮಾಜಿ ಸಂಸದ ಎ.ಪಿ. ಅಬ್ದುಲ್ಲಾಕುಟ್ಟಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಅವರು ಈಗ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News