×
Ad

ಮತದಾರರ ಪಟ್ಟಿಗಳನ್ನು ತಿರುಚಲು ಬೃಹತ್ ಪಿತೂರಿ: ಕಾಂಗ್ರೆಸ್

ನಾಳೆ(ಆ.17)ರಿಂದ ಬಿಹಾರದಲ್ಲಿ ‘‘ಮತದಾರರ ಹಕ್ಕುಗಳ ಯಾತ್ರೆ’’

Update: 2025-08-16 20:18 IST

ಪವನ್ ಖೇರಾ | PC : PTI 

ಹೊಸದಿಲ್ಲಿ, ಆ. 16: ದೇಶಾದ್ಯಂತ ಮತದಾರರ ಪಟ್ಟಿಗಳನ್ನು ತಿರುಚಿ, ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಬೃಹತ್ ಪಿತೂರಿಯೊಂದು ನಡೆಯುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ ಹಾಗೂ ಇದರ ವಿರುದ್ಧ ತಾನು ನಡೆಸುತ್ತಿರುವ ‘ಮತದಾರರ ಹಕ್ಕುಗಳ ಯಾತ್ರೆ’ ಮಾರ್ಗನಕ್ಷೆಯನ್ನು ಬಿಡುಗಡೆಗೊಳಿಸಿದೆ.

‘‘ಪಿತೂರಿ ಮಾಡಿದವರು ಹಿಂದೆ ಸರಿಯವುದಿಲ್ಲ, ಅವರು ಮತಗಳನ್ನು ಕದಿಯುತ್ತಲೇ ಹೋಗುತ್ತಾರೆ. ನಕಲಿ ಮತದಾರರ ಹೆಸರುಗಳನ್ನು ಸೇರಿಸುವ ಮತ್ತು ಅಸಲಿ ಮತದಾರರ ಹೆಸರುಗಳನ್ನು ಅಳಿಸುವ ಆಟ ಎಷ್ಟು ವ್ಯಾಪಕವಾಗಿ ನಡೆದಿದೆಯೆಂದರೆ, ಇದರಲ್ಲಿ ಬಿಜೆಪಿಯವರು ಸಾಕ್ಷಿಸಮೇತ ಸಿಕ್ಕಿ ಬಿದ್ದಿದ್ದಾರೆ. ಈಗ ಸಾಮಾನ್ಯ ಜನರು ಕೂಡ ಮತಗಳ್ಳತನದ ಬಗ್ಗೆ ಸಾಕ್ಷ್ಯಗಳನ್ನು ಕೊಡುತ್ತಿದ್ದಾರೆ. ಇಂದು ಮತದಾನದ ಹಕ್ಕನ್ನು ದಲಿತರು, ವಂಚಿತರು, ಶೋಷಿತರು ಮತ್ತು ಅಲ್ಪಸಂಖ್ಯಾತರಿಂದ ಕಿತ್ತುಕೊಳ್ಳಲಾಗುತ್ತಿದೆ. ನಾಳೆ ಪ್ರಜಾಪ್ರಭುತ್ವದಲ್ಲಿ ಅವರು ಪಾಲ್ಗೊಳ್ಳುವುದನ್ನೇ ಕಿತ್ತುಕೊಳ್ಳಲಾಗುತ್ತದೆ. ದೇಶದ ಬಡ ವರ್ಗಗಳ ಮೇಲೆ ದಾಳಿ ನಡೆಸಲು ಪಿತೂರಿಯೊಂದನ್ನು ರೂಪಿಸಲಾಗುತ್ತಿದೆ. ಇದರ ವಿರುದ್ಧ ದೇಶದ ಜನರು ತಮ್ಮ ಧ್ವನಿಗಳನ್ನು ಎತ್ತಿದ್ದಾರೆ’’ ಎಂದು ದಿಲ್ಲಿಯಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಮಾಧ್ಯಮ ಮತ್ತು ಪ್ರಚಾರ ಇಲಾಖೆಯ ಅಧ್ಯಕ್ಷ ಪವನ್ ಖೇರಾ ಹೇಳಿದರು.

‘ಮತದಾರರ ಹಕ್ಕುಗಳ ಯಾತ್ರೆ’ಯು ಬಿಹಾರದ ಸಸಾರಾಮ್‌ ನಲ್ಲಿ ರವಿವಾರ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು. ಯಾತ್ರೆಯು 16 ದಿನಗಳಲ್ಲಿ ರಾಜ್ಯಾದ್ಯಂತ 1,300 ಕಿ.ಮೀ. ಅಂತರವನ್ನು ಕ್ರಮಿಸಲಿದೆ ಎಂದು ಖೇರಾ ತಿಳಿಸಿದರು. ಯಾತ್ರೆಯು ಪಾಟ್ನಾದಲ್ಲಿ ಸಾರ್ವಜನಿಕ ಸಭೆಯೊಂದಿಗೆ ಮುಕ್ತಾಯಗೊಳ್ಳಲಿದೆ. ಈ ಸಭೆಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರು ಪಾಲ್ಗೊಳ್ಳಲಿದ್ದಾರೆ.

ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ಮಾಡಿದ ಅವರು, ಈ ಸಾಂವಿಧಾನಿಕ ಸಂಸ್ಥೆಯು ಈಗ ‘‘ಈ ಡಬಲ್ ಇಂಜಿನ್‌ನ ಒಂದು ಭಾಗ’’ವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಅದರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಘೋಷಿಸಿದರು. ‘‘ಮತದಾರರ ಹಕ್ಕುಗಳ ಯಾತ್ರೆಯು ಐತಿಹಾಸಿಕ ಪ್ರಯಾಣವಾಗಿದೆ. ಇದು ನಮ್ಮೆಲ್ಲರ ಅಸ್ತಿತ್ವಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಒಂದು ಮೈಲಿಗಲ್ಲಾಗಲಿದೆ’’ ಎಂದು ಪವನ್ ಖೇರಾ ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News