×
Ad

ಗುಜರಾತ್‌ ನಲ್ಲಿ 16,000 ಕೋಟಿ ರೂ. ಮೌಲ್ಯದ ಮಾದಕದ್ರವ್ಯ ವಶ; ಸದೃಢ ಕ್ರಮವಿಲ್ಲ: ಕಾಂಗ್ರೆಸ್

Update: 2025-11-25 21:54 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ನ. 25: ಗುಜರಾತ್‌ ನ ಬಿಜೆಪಿ ಸರಕಾರದ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ಕಾಂಗ್ರೆಸ್, ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು 16,000 ಕೋಟಿ ರೂಪಾಯಿ ಮೌಲ್ಯದ ಮಾದಕದ್ರವ್ಯ ವಶಪಡಿಸಿಕೊಳ್ಳಲಾಗಿದೆಯಾದರೂ, ಯಾವುದೇ ಪ್ರಕರಣದಲ್ಲಿ ಒಬ್ಬನೇ ಒಬ್ಬ ಪಾತಕಿಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಮತ್ತು ಯಾವುದೇ ಸದೃಢ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಹೇಳಿದೆ.

ಅಕ್ರಮ ಮದ್ಯ ಮಾರಾಟಗಾರರು ಮತ್ತು ಮಾದಕದ್ರವ್ಯ ವ್ಯಾಪಾರಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲರಾಗಿರುವ ಪೊಲೀಸರು ತಮ್ಮ ಕೆಲಸಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೆವಾನಿ ನೀಡಿರುವ ಎಚ್ಚರಿಕೆಯನ್ನು ಖಂಡಿಸಿ ಅವರ ವಿರುದ್ಧ ಉತ್ತರ ಗುಜರಾತ್‌ ನ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದ ಒಂದು ದಿನದ ಬಳಿಕ ಕಾಂಗ್ರೆಸ್ ಈ ಹೇಳಿಕೆ ನೀಡಿದೆ.

ಮೆವಾನಿ ಹೇಳಿಕೆಯನ್ನು ಖಂಡಿಸಿ ಪೊಲೀಸರ ಸಂಬಂಧಿಕರು ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದಾರೆ ಮತ್ತು ಅವರು ತನ್ನ ಹೇಳಿಕೆಗಾಗಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.

ಶಾಲೆಯೊಂದರ ಪಕ್ಕದಲ್ಲೇ ‘‘ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಅಂಗಂಡಿಯೊಂದರ’’ ಮೇಲೆ ಮೆವಾನಿ ಮತ್ತು ಸಾರ್ವಜನಿಕರು ‘‘ದಾಳಿ ನಡೆಸಿದ್ದಾರೆ’’ ಎಂದು ಕೆಲವು ದಿನಗಳ ಹಿಂದೆ ಗುಜರಾತ್ ಕಾಂಗ್ರೆಸ್ ನಾಯಕ ಹಾಗೂ ಪಕ್ಷದ ಸೇವಾ ದಳ ಮುಖ್ಯಸ್ಥ ಲಾಲ್‌ಜಿ ದೇಸಾಯಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News