×
Ad

‘ಆಪರೇಷನ್ ಸಿಂಧೂರ’ದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಪೋಸ್ಟ್; ಗುಜರಾತ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಾಜೇಶ್ ಸೋನಿ ಬಂಧನ

Update: 2025-06-06 22:10 IST

ರಾಜೇಶ್ ಸೋನಿ | PC : PTI 

ಅಹ್ಮದಾಬಾದ್: ‘ಆಪರೇಷನ್ ಸಿಂಧೂರ’ದ ಕುರಿತ ಸಾಮಾಜಿಕ ಮಾಧ್ಯಮದ ವಿವಾದಾತ್ಮಕ ಪೋಸ್ಟ್ ಕುರಿತು ದಾಖಲಾದ ದೂರಿನ ಹಿನ್ನೆಲೆಯಲ್ಲಿ ಗುಜರಾತ್‌ನ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಸೋನಿ ಅವರನ್ನು ಗಾಂಧಿನಗರದ ಸೈಬರ್ ಕ್ರೈಮ್ ಬ್ರಾಂಚ್ ಬಂಧಿಸಿದೆ.

ಸೈಬರ್ ಕ್ರೈಮ್‌ ನ ಸಬ್ ಇನ್ಸ್‌ಪೆಕ್ಟರ್ ದೂರಿನ ಪ್ರಕಾರ, ರಾಜೇಶ್ ಸೋನಿ ಅವರು ಆಪರೇಷನ್ ಸಿಂಧೂರ, ರಫೇಲ್ ಒಪ್ಪಂದ ಹಾಗೂ ಇತರ ಅತಿ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿ ತನ್ನ ಫೇಸ್‌ಬುಕ್ ಪೇಜ್‌ ನಲ್ಲಿ ವೀಡಿಯೊ ಹಾಗೂ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಭಾರತೀಯ ಸೇನೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ, ಕರ್ತವ್ಯಗಳ ಬಗ್ಗೆ ಅನುಮಾನ ವ್ಯಕ್ತಪಡಿಸುವ, ಶಸಸ್ತ್ರ ಪಡೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುವ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ರಾಷ್ಟ್ರೀಯ ಭದ್ರತೆಯ ಕುರಿತು ಆಂತಕ ವ್ಯಕ್ತಪಡಿಸುವ ಗುರಿಯನ್ನು ಈ ಪೋಸ್ಟ್‌ ಗಳು ಹೊಂದಿದ್ದವು ಎಂದು ಆರೋಪಿಸಲಾಗಿದೆ.

ಆಕ್ಷೇಪಾರ್ಹ ಅಂಶವನ್ನು ಪೋಸ್ಟ್ ಮಾಡಿರುವುದಕ್ಕಾಗಿ ಸೋನಿ ಅವರ ವಿರುದ್ಧ ದಾಖಲಾದ ಎಫ್‌ಐಆರ್ ‘‘ಯೋಧರಿಗೆ ಮನ್ನಣೆ ಸಿಗುವುದಿಲ್ಲ ಎಂಬುದನ್ನು ವಿಶೇಷವಾಗಿ ಗಮನಿಸಿ. ಆಪರೇಷನ್ ಸಿಂಧೂರದಲ್ಲಿ ಹಾರುವ ರಫೇಲ್‌ ನ ವೆಚ್ಚ ಈಗ ದ್ವಿಗುಣಗೊಳ್ಳಲಿದೆ. ಈ ವೆಚ್ಚವನ್ನು ಭವಿಷ್ಯದಲ್ಲಿ ಅವರ ಪೋಟೊ ಹಾಗೂ ಪ್ರಚಾರಕ್ಕಾಗಿ ಬಳಸಲಾಗುತ್ತದೆ’’ ಎಂಬ ಹೇಳಿಕೆಯನ್ನು ಕೂಡ ಒಳಗೊಂಡಿದೆ.

ಇದರೊಂದಿಗೆ ‘‘22 ವರ್ಷದ ಅಗ್ನಿವೀರ್ ನೌಜ್ವಾನ್ ನಿವೃತ್ತರಾಗಬೇಕು ಅಥವಾ ಮನೆಗೆ ಹೋಗಬೇಕು. ಆದರೆ, 73 ವರ್ಷದ ವ್ಯಕ್ತಿ ಇನ್ನೊಂದು ಅವಕಾಶವನ್ನು ಆಗ್ರಹಿಸುತ್ತಿದ್ದಾರೆ’’ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊ ಹಾಗೂ ಚಿತ್ರವನ್ನು ಹಂಚಿಕೊಳ್ಳಲಾಗಿದೆ.

ರಾಜೇಶ್ ಸೋನಿ ಅವರ ಬಂಧನ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಗುಜರಾತ್ ಕಾಂಗ್ರೆಸ್‌ ನ ಅಧ್ಯಕ್ಷ ಶಕ್ತಿ ಸಿನ್ಹ ಗೋಹಿಲ್ ಈ ನಡೆಯನ್ನು ಖಂಡಿಸಿದ್ದಾರೆ. ಇದು ಪ್ರತಿಪಕ್ಷಗಳ ಧ್ವನಿ ಅಡಗಿಸುವ ಪ್ರಯತ್ನ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News