ಛತ್ತೀಸ್‌ಗಢ, UPಯಲ್ಲಿ ಕ್ರಿಸ್ಮಸ್ ಆಚರಣೆ ಗುರಿಯಾಗಿರಿಸಿ ಸಂಘ ಪರಿವಾರದಿಂದ ದಾಳಿ
Photo Credit : X
ರಾಯಪುರ/ಲಕ್ನೋ, ಡಿ. 25: ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಕ್ರಿಸ್‌ಮಸ್ ಆಚರಣೆಗಳನ್ನು ಗುರಿಯಾಗಿರಿಸಿ ಸಂಘ ಪರಿವಾರದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ಛತ್ತೀಸ್‌ಗಢದಲ್ಲಿ ಮತಾಂತರ ವಿರೋಧಿಸಿ ಸಂಘ ಪರಿವಾರ ಬಂದ್ ಗೆ ಕರೆ ನೀಡಿದ ಸಂದರ್ಭವೇ ಕ್ರಿಸ್ಮಸ್ ಆಚರಣೆಯ ಮೇಲೆ ದಾಳಿ ನಡೆಸಲಾಗಿದೆ.
ಛತ್ತೀಸ್‌ಗಡದ ರಾಯಪುರದಲ್ಲಿ ಸಂಘ ಪರಿವಾರದ ಸುಮಾರು 100 ಕಾರ್ಯಕರ್ತರು ಶಾಪಿಂಗ್ ಮಾಲ್ ಒಂದಕ್ಕೆ ನುಗ್ಗಿದ್ದಾರೆ. ಕ್ರಿಸ್ಮಸ್ ಅಲಂಕಾರಗಳು ಹಾಗೂ ಸಾಂತಾ ಕ್ಲಾಸ್ ನ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಹೇಳಲಾಗಿದೆ.
30 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಯಪುರ ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶದ ಬರೇಲಿಯಲ್ಲಿ ಶನಿವಾರ ರಾತ್ರಿ ಕ್ರಿಶ್ಚಿಯನ್ ಚರ್ಚ್ ಹೊರಗೆ ಸಂಘ ಪರಿವಾರದ ಕಾರ್ಯಕರ್ತರು ಹನುಮಾನ್ ಚಾಲೀಸ್ ಪಠಿಸಿದರು. ಈ ಘಟನೆ ಪೊಲೀಸರ ಸಮ್ಮುಖದಲ್ಲೇ ನಡೆದಿದೆ. ಹನುಮಾನ್ ಚಾಲಿಸ್ ಪಠಿಸುವುದನ್ನು ಅವರು ತಮ್ಮ ಮೊಬೈಲ್ ಫೋನ್ ನಲ್ಲಿ ದಾಖಲಿಸಿಕೊಳ್ಳುವುದನ್ನು ಪೊಲೀಸ್ ಸಿಬ್ಬಂದಿ ನೋಡಿದ್ದಾರೆ. ಆದರೆ, ಚದುರುವಂತೆ ಗುಂಪಿಗೆ ಸೂಚಿಸಿಲ್ಲ ಎಂದು ಆರೋಪಿಸಲಾಗಿದೆ.
ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಮತಾಂತರದ ಆರೋಪದಲ್ಲಿ ಅಂಧ ಮಹಿಳೆಯ ಮೇಲೆ ನಡೆದ ಹಲ್ಲೆ ಹಾಗೂ ಕೇರಳದ ಪಾಲಕ್ಕಾಡ್‌ನಲ್ಲಿ ಮಕ್ಕಳ ಕ್ರಿಸ್ಮಸ್ ಕರೋಲ್ ಮೇಲೆ ಆರೆಸ್ಸೆಸ್ ಕಾರ್ಯಕರ್ತ ನಡೆಸಿದ ದಾಳಿ ಸೇರಿದಂತೆ ಇತ್ತೀಚೆಗೆ ನಡೆದ ದಾಳಿಗಳ ವಿರುದ್ಧ ತೀವ್ರ ಪ್ರತಿಭಟನೆಗಳ ನಡುವೆಯೇ ಈ ಘಟನೆಗಳು ನಡೆದಿವೆ.