‘ಮತ ಕಳ್ಳತನ’ಕ್ಕೆ ವಿರೋಧ ದಾಖಲಿಸುವಂತೆ ಆಗ್ರಹಿಸಿ ಕಾಂಗ್ರೆಸ್‌ನಿಂದ ಅಭಿಯಾನ
ರಾಹುಲ್ ಗಾಂಧಿ - Photo : PTI
ಹೊಸದಿಲ್ಲಿ,ಆ.10: ಚುನಾವಣಾ ಅಕ್ರಮಗಳ ಕುರಿತು ರಾಹುಲ್ ಗಾಂಧಿಯವರ ಆರೋಪಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವೆಬ್ ಪುಟವೊಂದನ್ನು ಆರಂಭಿಸಿದ್ದು,‘ಮತ ಕಳ್ಳತನ’ಕ್ಕಾಗಿ ಚುನಾವಣಾ ಆಯೋಗದ ಉತ್ತರದಾಯಿತ್ವಕ್ಕೆ ಆಗ್ರಹಿಸಲು ಮತ್ತು ಡಿಜಿಟಲ್ ಮತದಾರರ ಪಟ್ಟಿಗಳಿಗಾಗಿ ರಾಹುಲ್ ಬೇಡಿಕೆಗೆ ಬೆಂಬಲವನ್ನು ವ್ಯಕ್ತಪಡಿಸಲು ಜನರು ಈ ವೆಬ್ ಪುಟದಲ್ಲಿ ನೋಂದಾಯಿಸಿಕೊಳ್ಳಬಹುದು.
‘ಮತ ಕಳ್ಳತನ’ವು ‘ಒಬ್ಬ ವ್ಯಕ್ತಿ, ಒಂದು ಮತ’ ಎಂಬ ಮೂಲಭೂತ ಪ್ರಜಾಸತ್ತಾತ್ಮಕ ತತ್ವದ ಮೇಲಿನ ದಾಳಿಯಾಗಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ರಾಹುಲ್ ಗಾಂಧಿ, ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳಿಗೆ ಕಳಂಕರಹಿತ ಮತದಾರರ ಪಟ್ಟಿಯು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
‘ಚುನಾವಣಾ ಆಯೋಗಕ್ಕೆ ನಮ್ಮ ಬೇಡಿಕೆಯು ಸ್ಪಷ್ಟವಾಗಿದೆ ; ಪಾರದರ್ಶಕತೆಯನ್ನು ತೋರಿಸಿ ಹಾಗೂ ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳು ಸ್ವತಃ ಪರಿಶೀಲಿಸಲು ಸಾಧ್ಯವಾಗುವಂತೆ ಡಿಜಿಟಲ್ ಮತದಾರರ ಪಟ್ಟಿಗಳನ್ನು ಬಹಿರಂಗಗೊಳಿಸಿ’ ಎಂದು ಅವರು ಹೇಳಿದ್ದಾರೆ. Votechori.in/ecdemand ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಈ ಬೇಡಿಕೆಯನ್ನು ಬೆಂಬಲಿಸುವಂತೆ ಅವರು ಜನರನ್ನು ಆಗ್ರಹಿಸಿದ್ದಾರೆ. ಇದು ಪ್ರಜಾಪ್ರಭುತ್ವವನ್ನು ರಕ್ಷಿಸಲು ಹೋರಾಟ ಎಂದೂ ಅವರು ಹೇಳಿದ್ದಾರೆ.
ಯಾರು ಬೇಕಾದರೂ ಪೋರ್ಟಲ್ ಲಿಂಕ್‌ನ್ನು ಕ್ಲಿಕ್ಕಿಸಿ ‘vote chori proof,demand EC accountability and report vote chori’ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಬಿಜೆಪಿ ಮತ್ತು ಚುನಾವಣಾ ಆಯೋಗ ಶಾಮೀಲಾಗಿ ಚುನಾವಣೆಗಳಲ್ಲಿ ‘ಭಾರೀ ಕ್ರಿಮಿನಲ್ ವಂಚನೆ’ ನಡೆಸಿವೆ ಎಂಬ ತನ್ನ ಸ್ಫೋಟಕ ಹೇಳಿಕೆಗಳನ್ನು ಪುನರುಚ್ಚರಿಸಿರುವ ರಾಹುಲ್ ವೀಡಿಯೊವನ್ನೂ ಪೋರ್ಟಲ್ ಒಳಗೊಂಡಿದೆ. ರಾಹುಲ್ ಕರ್ನಾಟಕದ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹಾದೇವಪುರ ವಿಧಾನಸಭಾ ಕ್ಷೇತ್ರದ ವಿಶ್ಲೇಷಣೆಯನ್ನು ಉಲ್ಲೇಖಿಸಿ, ಇದು ಸಂವಿಧಾನದ ವಿರುದ್ಧ ಅಪರಾಧವಾಗಿದೆ ಎಂದು ಹೇಳಿದ್ದರು.
‘ಮತದಾನವು ನಮ್ಮ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ, ಆದರೆ ಅದು ಚುನಾವಣಾ ಆಯೋಗದ ಶಾಮೀಲಾತಿಯೊಂದಿಗೆ ಬಿಜೆಪಿಯಿಂದ ವ್ಯವಸ್ಥಿತ ದಾಳಿಗೊಳಗಾಗಿದೆ’ ಎಂಬ ಸಂದೇಶವನ್ನು ಪೋರ್ಟಲ್ ಒಳಗೊಂಡಿದೆ.
ವ್ಯಕ್ತಿ ಪೋರ್ಟಲ್‌ನಲ್ಲಿ ನೊಂದಾಯಿಸಿಕೊಂಡ ಬಳಿಕ ಆತ/ಆಕೆಯ ಹೆಸರಿನಲ್ಲಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಮತ್ತು ‘ನಾನು ಮತ ಕಳ್ಳತನಕ್ಕೆ ವಿರುದ್ಧವಾಗಿದ್ದೇನೆ’ ಎಂಬ ಒಕ್ಕಣೆಯನ್ನು ಈ ಪ್ರಮಾಣ ಪತ್ರವು ಹೊಂದಿರುತ್ತದೆ.
‘ಚುನಾವಣಾ ಆಯೋಗದಿಂದ ಡಿಜಿಟಲ್ ಮತದಾರರ ಪಟ್ಟಿಗಳಿಗಾಗಿ ರಾಹುಲ್ ಗಾಂಧಿಯವರ ಬೇಡಿಕೆಯನ್ನು ನಾನು ಬೆಂಬಲಿಸುತ್ತೇನೆ’ ಎಂದು ಪ್ರಮಾಣಪತ್ರದಲ್ಲಿರುತ್ತದೆ. ಪೋರ್ಟಲ್ ದೂರವಾಣಿ ಸಂಖ್ಯೆಯೊಂದಕ್ಕೆ ಕರೆ ಮಾಡಲು ಮತ್ತು ಎಸ್ಎಂಎಸ್ ನಲ್ಲಿಯ ಲಿಂಕ್‌ನ್ನು ಭರ್ತಿ ಮಾಡಿ ನೋಂದಾಯಿಸಿಕೊಳ್ಳುವ ಆಯ್ಕೆಯನ್ನೂ ನೀಡಲಾಗಿದೆ.
ಪ್ರಮಾಣ ಪತ್ರವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಮತ್ತು ಖಜಾಂಚಿ ಅಜಯ ಮಾಕೆನ್ ಅವರ ಸಹಿಗಳನ್ನು ಒಳಗೊಂಡಿದೆ.
ಹಲವಾರು ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಪೋರ್ಟಲ್‌ನಲ್ಲಿ ನೊಂದಾಯಿಸಿಕೊಂಡಿದ್ದು, ಪ್ರಮಾಣಪತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿಯ ಮತ ಕಳ್ಳತನ ಆರೋಪಕ್ಕೆ ಕಾಂಗ್ರೆಸ್ ನಾಯಕರು ಕಾವು ನೀಡುತ್ತಿದ್ದಂತೆ ಚುನಾವಣಾ ಆಯೋಗದ ಅಧಿಕಾರಿಗಳು ತನ್ನ ಹೇಳಿಕೆಗಳನ್ನು ದೃಢೀಕರಿಸಿ ಘೋಷಣೆಯೊಂದಕ್ಕೆ ಸಹಿ ಹಾಕುವಂತೆ ಇಲ್ಲವೇ ಸುಳ್ಳು ಆರೋಪಗಳನ್ನು ಮಾಡಿದ್ದಕ್ಕೆ ದೇಶದ ಕ್ಷಮೆ ಯಾಚಿಸುವಂತೆ ಶನಿವಾರ ರಾಹುಲ್‌ಗೆ ಮತ್ತೆ ಒತ್ತಾಯಿಸಿದ್ದರು.