ರೇವಂತ್ ರೆಡ್ಡಿ ಆದೇಶದ ಮೇರೆಗೆ ಕಾಂಗ್ರೆಸ್ ಸಂಸದರು NDA ಉಪರಾಷ್ಟ್ರಪತಿ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ: BRS ಶಾಸಕ ಆರೋಪ
ರೇವಂತ್ ರೆಡ್ಡಿ (Photo: PTI)
ಹೈದರಾಬಾದ್: ಇತ್ತೀಚೆಗೆ ನಡೆದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ಆದೇಶದ ಮೇರೆಗೆ NDA ಅಭ್ಯರ್ಥಿಗೆ ಮತ ಚಲಾಯಿಸಿರುವುದಾಗಿ ಮೂವರು ಕಾಂಗ್ರೆಸ್ ಸಂಸದರು ಒಪ್ಪಿಕೊಂಡಿದ್ದಾರೆ ಎಂದು ಮಂಗಳವಾರ ಬಿಆರ್‌ಎಸ್ ಶಾಸಕ ಪಡಿ ಕೌಶಿಕ್ ರೆಡ್ಡಿ ಆರೋಪಿಸಿದ್ದಾರೆ.
“ರೇವಂತ್ ರೆಡ್ಡಿಯ ಸೂಚನೆ ಮೇರೆಗೆ ಬಿಜೆಪಿಯ ಉಪ ರಾಷ್ಟ್ರಪತಿ ಅಭ್ಯರ್ಥಿಗೆ ಮತ ಚಲಾಯಿಸಿರುವುದಾಗಿ ಮೂವರು ಕಾಂಗ್ರೆಸ್ ಸಂಸದರು ನನ್ನ ಬಳಿ ವೈಯಕ್ತಿಕವಾಗಿ ಒಪ್ಪಿಕೊಂಡಿದ್ದಾರೆ. ಈ ವಿಷಯವನ್ನು ಪತ್ರಿಕಾಗೋಷ್ಠಿ ಹಮ್ಮಿಕೊಂಡು ಎಲ್ಲರಿಗೂ ಬಹಿರಂಗಪಡಿಸುವಂತೆ ಅವರು ನನ್ನ ಬಳಿ ಮನವಿಯನ್ನೂ ಮಾಡಿದ್ದಾರೆ” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ನಾನು ನನ್ನ ಕೆಲವು ಕಾಂಗ್ರೆಸ್ ಸ್ನೇಹಿತರಿಗೆ ಕರೆ ಮಾಡಿದಾಗ, 15 ಮಂದಿ ಕಾಂಗ್ರೆಸ್ ಸಂಸದರು ಮಾರಾಟವಾಗಿದ್ದಾರೆ ಎಂದು ಅವರು ನನಗೆ ತಿಳಿಸಿದರು. ಈ ಪೈಕಿ ತೆಲಂಗಾಣದ 8 ಸಂಸದರೂ ಮಾರಾಟವಾಗಿದ್ದಾರೆ” ಎಂದು ಅವರು ದೂರಿದ್ದಾರೆ.
ಇತ್ತೀಚೆಗೆ ನಡೆದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿ ವಿರುದ್ಧ ಎನ್ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಸುಲಭ ಗೆಲುವು ಸಾಧಿಸಿದ ಬೆನ್ನಿಗೇ ಕೇಳಿ ಬರುತ್ತಿರುವ ಅಡ್ಡ ಮತದಾನದ ಆರೋಪದ ಬೆನ್ನಿಗೇ ಈ ಆರೋಪವೂ ಕೇಳಿ ಬಂದಿದೆ.