ಕೆಮ್ಮಿನ ಸಿರಪ್ ಜಾಲದ ರೂವಾರಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂಧನ, ಸೋನಭದ್ರಕ್ಕೆ ಸ್ಥಳಾಂತರ
ಭೋಲಾ ಪ್ರಸಾದ್ | Photo Credit : indiatoday.in
ಸೋನಭದ್ರ (ಉತ್ತರ ಪ್ರದೇಶ) ಡಿ. 3: ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾದ ಕೆಮ್ಮಿನ ಸಿರಪ್ ಜಾಲದ ರೂವಾರಿ ಎಂದು ಹೇಳಲಾದ ಭೋಲಾ ಪ್ರಸಾದ್ ಜೈಸ್ವಾಲ್ ನನ್ನು ಪ್ರಯಾಣ ಅನುಮತಿ (ಟ್ರಾಸ್ಸಿಟ್ ರಿಮಾಂಡ್)ಪಡೆದು ಬುಧವಾರ ಇಲ್ಲಿಗೆ ಹಿಂದೆ ಕರೆದುಕೊಂಡು ಬರಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ವರ್ಮಾ ಅವರು ಆರೋಪಿ ಜೈಸ್ವಾಲ್ ನನ್ನು ಮಾಧ್ಯಮದ ಮುಂದೆ ಪ್ರದರ್ಶಿಸಿದರು. ‘‘ಔಷಧ ಮಾಫಿಯಾದ ಪಿತಾಮಹ ಜೈಸ್ವಾಲ್‌ನನ್ನು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ರವಿವಾರ ವಶಕ್ಕೆ ತೆಗೆದುಕೊಳ್ಳಲಾಯಿತು. ಈ ಸಂದರ್ಭ ಆತ ವಿದೇಶಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಎಂದು ವರದಿಯಾಗಿದೆ ಎಂದು ಅವರು ಹೇಳಿದರು.
ಇದಕ್ಕೆ ಮುನ್ನ ಅಕ್ಟೋಬರ್ 18ರಂದು ಪೊಲೀಸರು 2 ಕಂಟೈನರ್ ಟ್ರಕ್ ನಿಂದ 1,19,675 ಬಾಟಲಿ ನಿಷೇಧಿತ ಕೆಮ್ಮಿನ ಸಿರಪ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 3.5 ಕೋ.ರೂ. ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ಕ್ರಮಗಳಲ್ಲಿ ಜಾರ್ಖಂಡ್ ನಲ್ಲಿ 13,400 ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನವೆಂಬರ್ 3ರಂದು ರಾತ್ರಿ ಗಾಝಿಯಾಬಾದ್ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 3.4 ಕೋ.ರೂ. ಮೌಲ್ಯದ ನಿಷೇಧಿತ ಸಿರಪ್ ಹಾಗೂ 20 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ರಾಂಚಿಯ ‘ಶೈಲಿ ಟ್ರೇಡರ್ಸ್’ ಹೆಸರಿನಲ್ಲಿ ನಕಲಿ ಬಿಲ್ ಮಾಡುವ ಮೂಲಕ ಜೈಸ್ವಾಲ್ ದೊಡ್ಡ ಪ್ರಮಾಣದ ಅಕ್ರಮ ವ್ಯಾಪಾರವನ್ನು ನಡೆಸುತ್ತಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ವರ್ಮಾ ತಿಳಿಸಿದ್ದಾರೆ
ಎಸ್‌ಐಟಿ ತನಿಖೆ ಭಾದೋಹಿ, ಚಂಡೌಲಿ, ವಾರಣಾಸಿ ಹಾಗೂ ಸೋನಭದ್ರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 25 ಕೋ.ರೂ. ಮೌಲ್ಯದ ನಕಲಿ ವಹಿವಾಟನ್ನು ಪತ್ತೆ ಹಚ್ಚಿದೆ. ಇದರಲ್ಲಿ ಭಾಗಿಯಾದ ಹಲವು ಸಂಸ್ಥೆಗಳು ಅಸ್ತಿತ್ವದಲ್ಲಿ ಇಲ್ಲ ಎಂಬುದನ್ನು ಕೂಡ ಎಸ್‌ಐಟಿ ಕಂಡು ಕೊಂಡಿದೆ.