ವಿನೋದ್ ಅದಾನಿ ಸೇರಿದಂತೆ 66 ಭಾರತೀಯರಿಗೆ ಸೈಪ್ರಸ್ ‘ಗೋಲ್ಡನ್ ಪಾಸ್ಪೋರ್ಟ್’
ವಿನೋದ್ ಅದಾನಿ | Photo: NDTV
ಹೊಸದಿಲ್ಲಿ, : 2014 ಮತ್ತು 2020ರ ನಡುವೆ ‘ಗೋಲ್ಡನ್ ಪಾಸ್ಪೋರ್ಟ್’ ಯೋಜನೆಯಡಿ ಕೈಗಾರಿಕೋದ್ಯಮಿ ಗೌತಮ್ ಅದಾನಿಯ ಅಣ್ಣ ವಿನೋದ್ ಅದಾನಿ ಸೇರಿದಂತೆ 66 ಭಾರತೀಯರಿಗೆ ಸೈಪ್ರಸ್ ದೇಶದ ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗಿತ್ತು ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ಬುಧವಾರ ವರದಿ ಮಾಡಿದೆ.
ಅವರು ಈ ಯೋಜನೆಯಡಿ ಪಾಸ್ಪೋರ್ಟ್ ಗಾಗಿ 2016ರ ಆಗಸ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದೇ ವರ್ಷದ ನವೆಂಬರ್ 25ರಂದು ಅವರಿಗೆ ಸೈಪ್ರಸ್ ಪೌರತ್ವ ಲಭಿಸಿತ್ತು ಎಂದು ‘ಆರ್ಗನೈಸ್ಡ್ ಕ್ರೈಮ್ ಆ್ಯಂಡ್ ಕರಪ್ಶನ್ ರಿಪೋರ್ಟಿಂಗ್ ಪ್ರಾಜೆಕ್ಟ್’ ಸಂಗ್ರಹಿಸಿದ ಅಂಕಿಅಂಶಗಳು ತಿಳಿಸಿವೆ.
‘ಗೋಲ್ಡನ್ ಪಾಸ್ಪೋರ್ಟ್ ಯೋಜನೆ’ಯನ್ನು ಸೈಪ್ರಸ್ ಹೂಡಿಕೆ ಕಾರ್ಯಕ್ರಮ ಎಂಬುದಾಗಿಯೂ ಕರೆಯಲಾಗುತ್ತದೆ. ಆ ಯೋಜನೆಯನ್ನು, ವಿದೇಶಿ ನೇರ ಹೂಡಿಕೆಗಳನ್ನು ತರುವ ಉದ್ದೇಶದಿಂದ ಸಿರಿವಂತ ಉದ್ಯಮಿಗಳಿಗೆ ಪೌರತ್ವ ನೀಡಲು 2007ರಲ್ಲಿ ಜಾರಿಗೆ ತರಲಾಗಿತ್ತು. ಆದರೆ, ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ಸೈಪ್ರಸ್ ಪಾಸ್‌ಪೋರ್ಟ್ ಗಳನ್ನು ಪಡೆಯಲು ಯೋಜನೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅದನ್ನು 2020ರಲ್ಲಿ ರದ್ದುಪಡಿಸಲಾಗಿತ್ತು.
ಸೈಪ್ರಸ್ ಪಾಸ್ಪೋರ್ಟನ್ನು ಹೊಂದಿರುವ ವಿನೋದ್ ಅದಾನಿ, 1990ರ ದಶಕದಿಂದಲೂ ದುಬೈಯಲ್ಲಿ ವಾಸಿಸುತ್ತಿದ್ದಾರೆ.
ಅಂತರ್ರಾಷ್ಟ್ರೀಯ ಮಾರುಕಟ್ಟೆಯಿಂದ ನಿಧಿಗಳನ್ನು ಸಂಗ್ರಹಿಸುವ ಕೆಲಸದಲ್ಲಿ ವಿನೋದ್ ಅದಾನಿ ಅದಾನಿ ಗುಂಪಿನ ಪ್ರಮುಖ ಸಂಧಾನಕಾರರಾಗಿದ್ದರು ಎಂದು ಫೆಬ್ರವರಿಯಲ್ಲಿ ಅಮೆರಿಕದ ಸಂಸ್ಥೆ ಹಿಂಡನ್ಬರ್ಗ್ ರಿಸರ್ಚ್ ಆರೋಪಿಸಿತ್ತು. ಗೌತಮ್ ಅದಾನಿ ನೇತೃತ್ವದ ಗುಂಪು ತಪ್ಪು ಲೆಕ್ಕಗಳನ್ನು ಕೊಡುತ್ತಿದೆ, ಶೇರುಗಳ ಬೆಲೆಗಳನ್ನು ಅಕ್ರಮವಾಗಿ ಏರಿಸುತ್ತಿದೆ ಮತ್ತು ಕಪ್ಪು ಹಣ ಬಿಳುಪು ಮಾಡಲು ತೆರಿಗೆರಹಿತ ದೇಶಗಳನ್ನು ಅನುಚಿತವಾಗಿ ಬಳಸುತ್ತಿದೆ ಎಂಬುದಾಗಿಯೂ ವರದಿ ಹೇಳಿತ್ತು.