ಡೆಹ್ರಾಡೂನ್ ಮಹಿಳೆಯರಿಗೆ ಅಸುರಕ್ಷಿತ ನಗರ ಎಂದ ವರದಿ: ಸಮೀಕ್ಷೆ ನಡೆಸಿದ ಸಂಸ್ಥೆಗೆ ಸಮನ್ಸ್ ಜಾರಿ ಮಾಡಿದ ಪೊಲೀಸರು!
ಸಾಂದರ್ಭಿಕ ಚಿತ್ರ (credit: hindi.dynamitenews.com)
ಡೆಹ್ರಾಡೂನ್: ಮಹಿಳಾ ಸುರಕ್ಷತೆಯ ಕುರಿತಾದ NARI 2025ರ ವರದಿಯನ್ನು ಉತ್ತರಾಖಂಡ ಸರಕಾರ ತಳ್ಳಿ ಹಾಕಿದೆ. ಡೆಹ್ರಾಡೂನ್ ಪೊಲೀಸರು ವರದಿಯನ್ನು ಸಿದ್ಧಪಡಿಸಿದ ಪಿ-ವ್ಯಾಲ್ಯೂ ಖಾಸಗಿ ಸಂಸ್ಥೆಗೆ ಸಮನ್ಸ್ ಜಾರಿ ಮಾಡಿದೆ.
ಖಾಸಗಿ ಸಂಸ್ಥೆಯಾದ “ಪಿ-ವ್ಯಾಲ್ಯೂ ಅನಾಲಿಟಿಕ್ಸ್” ರಾಷ್ಟ್ರೀಯ ಮಹಿಳಾ ಸುರಕ್ಷತೆಯ ವಾರ್ಷಿಕ ವರದಿಯಲ್ಲಿ ಮಹಿಳೆಯರಿಗೆ ಅಸುರಕ್ಷಿತ 10 ನಗರಗಳಲ್ಲಿ ಒಂದೆಂದು ಡೆಹ್ರಾಡೂನ್ ಅನ್ನು ಪಟ್ಟಿ ಮಾಡಿದೆ.
ಪಿ-ವ್ಯಾಲ್ಯೂ ಅನಾಲಿಟಿಕ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ದತ್ತಾಂಶ ಸಂಗ್ರಹಣೆ ಮತ್ತು ವಿಶ್ಲೇಷಣೆ ನಡೆಸಿದ ತಂಡಕ್ಕೆ ಸಮೀಕ್ಷೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೊಂದಿಗೆ ಒಂದು ವಾರದೊಳಗೆ ಹಾಜರಾಗುವಂತೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ನಿರ್ದೇಶಿಸಿದ್ದಾರೆ.
ಸಮೀಕ್ಷೆ ನಡೆಸಿದ ಸಂಸ್ಥೆಯು ತೃಪ್ತಿದಾಯಕ ಉತ್ತರಗಳನ್ನು ನೀಡಲು ವಿಫಲವಾದರೆ ಅಥವಾ ವರದಿಯು ಆಧಾರರಹಿತವಾಗಿದೆ ಎಂದು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಎಸ್‌ಪಿ ಅಜಯ್ ಸಿಂಗ್ ಹೇಳಿದ್ದಾರೆ.
ಉತ್ತರಾಖಂಡ ಸರಕಾರ ಪಿ-ವ್ಯಾಲ್ಯೂ ಸಮೀಕ್ಷಾ ವರದಿಯನ್ನು ತಳ್ಳಿ ಹಾಕಿದೆ. ಇದು ವಾಸ್ತವವನ್ನು ಆಧರಿಸಿಲ್ಲ ಎಂದು ಹೇಳಿದೆ. ಡೆಹ್ರಾಡೂನ್‌ನಲ್ಲಿರುವ ವ್ಯಾಪಾರ ಸಂಘಗಳು ಮತ್ತು ಶಿಕ್ಷಣ ಸಂಸ್ಥೆಗಳು ಕೂಡ ವರದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದೂರುಗಳನ್ನು ಸಲ್ಲಿಸಿವೆ.
ಆಗಸ್ಟ್ 28ರಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಾಹತ್ಕರ್ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಿದ ಸಮೀಕ್ಷೆ ವಿವಾದಕ್ಕೆ ಕಾರಣವಾಗಿದೆ. ಪಿ-ವ್ಯಾಲ್ಯೂ ಪ್ರತಿನಿಧಿ ಮಯಂಕ್ ಧಯ್ಯಾ ಈ ಸಮೀಕ್ಷೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕಾಗಿ ನಡೆಸಲಾಗಿದೆ. ಒಂದು ತಂಡ ಡೇಟಾ ಸಂಗ್ರಹಿಸಿ, ಇನ್ನೊಂದು ತಂಡ ವಿಶ್ಲೇಷಣೆ ಮಾಡಿದೆ ಎಂದು ಹೇಳಿದ್ದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2022ರ ದತ್ತಾಂಶದ ಪ್ರಕಾರ, ಡೆಹ್ರಾಡೂನ್‌ನಲ್ಲಿ ಯಾವುದೇ ಅತ್ಯಾಚಾರ ಎಸಗಿ ಕೊಲೆ ಪ್ರಕರಣ ನಡೆದಿಲ್ಲ. ಆದರೆ, ವರದಕ್ಷಿಣೆಗೆ ಸಂಬಂಧಿಸಿದ 8 ಸಾವುಗಳು, 13 ಆತ್ಮಹತ್ಯೆಗೆ ಪ್ರಚೋದನೆಯ ಪ್ರಕರಣಗಳು, 184 ಅತ್ಯಾಚಾರ ಪ್ರಕರಣ ಸೇರಿ ನಗರದಲ್ಲಿ ಮಹಿಳೆಯರ ವಿರುದ್ಧ ಒಟ್ಟು 1,205 ಅಪರಾಧ ಪ್ರಕರಣಗಳು ನಡೆದಿದೆ. ಅಂದರೆ ರಾಜ್ಯದ 4,337 ಪ್ರಕರಣಗಳಲ್ಲಿ 27% ಪ್ರಕರಣ ಡೆಹ್ರಾಡೂನ್‌ನಲ್ಲಿ ನಡೆದಿದೆ.
2021ರಲ್ಲಿ ನಗರದಲ್ಲಿ 10 ವರದಕ್ಷಿಣೆ ಸಾವುಗಳು, ಪತಿ ಅಥವಾ ಸಂಬಂಧಿಕರಿಂದ ದೌರ್ಜನ್ಯದ 132 ಪ್ರಕರಣಗಳು, 113 ಅತ್ಯಾಚಾರ ಪ್ರಕರಣಗಳು ಮತ್ತು ಮಹಿಳೆಯರ ವಿರುದ್ಧ 756 ಒಟ್ಟು ಅಪರಾಧಗಳು ನಡೆದಿವೆ. ಅಂದರೆ ರಾಜ್ಯದಲ್ಲಿ ನಡೆದ 3,431 ಪ್ರಕರಣಗಳಲ್ಲಿ 22% ರಷ್ಟಿದೆ.
NARI 2025ರ ವರದಿಯು ದಿಲ್ಲಿಯನ್ನು ಮಹಿಳೆಯರಿಗೆ ಅತ್ಯಂತ ಕಡಿಮೆ ಸುರಕ್ಷಿತ ನಗರಗಳಲ್ಲಿ ಪಟ್ಟಿ ಮಾಡಿದೆ. ಮಹಿಳೆಯರ ವಿರುದ್ಧ 14,277 ಅಪರಾಧಗಳು ನಡೆದಿದೆ ಎಂದು ತಿಳಿಸಿದೆ.