ಶಾಲೆಯ ಹೊರಗೆ ಇರಿತ: ಎದೆಗೆ ಇರಿದಿದ್ದ ಚಾಕುವಿನೊಂದಿಗೆ ಪೊಲೀಸ್ ಠಾಣೆಗೆ ತಲುಪಿದ ವಿದ್ಯಾರ್ಥಿ!
ಮೂವರು ಅಪ್ರಾಪ್ತರು ಪೊಲೀಸ್ ವಶಕ್ಕೆ
ಸಾಂದರ್ಭಿಕ ಚಿತ್ರ (AI)
ಹೊಸದಿಲ್ಲಿ: 15 ವರ್ಷದ ಬಾಲಕನೊಬ್ಬನಿಗೆ ಆತನ ಶಾಲೆಯ ಹೊರಗೆ ಮೂವರು ಅಪ್ರಾಪ್ತ ಬಾಲಕರು ಚಾಕುವಿನಿಂದ ಇರಿದಿರುವ ಘಟನೆ ಕೇಂದ್ರ ದಿಲ್ಲಿಯ ಪಹರ್ ಗಂಜ್ ಪ್ರದೇಶದಲ್ಲಿ ನಡೆದಿದ್ದು, ಈ ಸಂಬಂಧ ಎಲ್ಲ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 4ರಂದು ಈ ಘಟನೆ ನಡೆದಿದ್ದು, ಎದೆಗೆ ಇರಿದಿದ್ದ ಚಾಕುವಿನೊಂದಿಗೆ ಬಾಲಕನು ಪಹರ್ ಗಂಜ್ ಪೊಲೀಸ್ ಠಾಣೆಗೆ ತಲುಪಿದಾಗ ಈ ಘಟನೆ ಬೆಳಕಿಗೆ ಬಂದಿತ್ತು ಎಂದು ಅಧಿಕೃತ ಪ್ರಕಟನೆಯಲ್ಲಿ ಪೊಲೀಸರು ಹೇಳಿದ್ದಾರೆ.
ಆತನನ್ನು ತಕ್ಷಣವೇ ಕಲಾವತಿ ಸರಣ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ, ಅಲ್ಲಿಂದ ಆತನನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆತನ ಎದೆಯಿಂದ ಯಶಸ್ವಿಯಾಗಿ ಚಾಕುವನ್ನು ಹೊರ ತೆಗೆದರು ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 10-15 ದಿನಗಳ ಹಿಂದೆ ಕೆಲವು ಬಾಲಕರು ಅಪ್ರಾಪ್ತ ಆರೋಪಿಗಳಿಗೆ ಥಳಿಸಿದ್ದರು ಹಾಗೂ ಈ ಹಲ್ಲೆಗೆ ಸಂತ್ರಸ್ತ ಬಾಲಕನ ಪ್ರಚೋದನೆ ಕಾರಣ ಎಂದು ಅವರು ಶಂಕಿಸಿದ್ದರು. ಸಂತ್ರಸ್ತ ಬಾಲಕನ ವಿರುದ್ಧ ಸೇಡು ತೀರಿಸಿಕೊಳ್ಳಲಲು ಶಾಲೆಯ ದ್ವಾರದ ಬಳಿ ಆತನನ್ನು ಅಡ್ಡಗಟ್ಟಿದ್ದ ಆರೋಪಿಗಳು, ಆತನಿಗೆ ಚಾಕುವಿನಿಂದ ಇರಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ, ಭಾರತೀಯ ನ್ಯಾಯ ಸಂಹಿತೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್ ಗಳಡಿ ಪಹರ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.