ದಿಲ್ಲಿ ಸಿಎಂಗೆ ಹಲ್ಲೆ ನಡೆಸಿದ ವ್ಯಕ್ತಿ ತನ್ನ ಸಂಬಂಧಿಯನ್ನು ಜೈಲಿನಿಂದ ಬಿಡುಗಡೆಗೊಳಿಸಲು ಬಯಸಿದ್ದ!
ತನ್ನ ಪುತ್ರ ಮಾನಸಿಕ ಅಸ್ವಸ್ಥ ಎಂದ ಹಲ್ಲೆಕೋರನ ತಾಯಿ
ರಾಜೇಶ್ ಭಾಯಿ ಖೀಮ್ಜಿ ಭಾಯಿ ಸಕಾರಿಯ (Photo credit: indiatoday.in)
ಹೊಸದಿಲ್ಲಿ: ಇಂದು ಬೆಳಗ್ಗೆ ಸಿವಿಲ್ ಲೈನ್ಸ್ ನಲ್ಲಿರುವ ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾರ ಅಧಿಕೃತ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಜನ್ ಸುನ್ವಾಲ್’ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ಅವರಿಗೆ ಹಲ್ಲೆ ನಡೆಸಿದ್ದು, ಆತನನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ರಾಜ್ ಕೋಟ್ ನಿವಾಸಿ ರಾಜೇಶ್ ಭಾಯಿ ಖೀಮ್ಜಿ ಭಾಯಿ ಸಕಾರಿಯ (41) ಎಂದು ಗುರುತಿಸಲಾಗಿದ್ದು, ಆತನ ಓರ್ವ ಸಂಬಂಧಿ ಜೈಲಿನಲ್ಲಿದ್ದಾನೆ ಎನ್ನಲಾಗಿದೆ. ಸದ್ಯ ಈ ವಿಷಯದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಆತನನ್ನು ಬಿಡುಗಡೆಗೆ ಆಗ್ರಹಿಸಿ ಆತ ಮನವಿ ಪತ್ರ ತಂದಿದ್ದ ಎಂದು ಹೇಳಲಾಗಿದೆ.
ಆತ ದಿಲ್ಲಿ ಮುಖ್ಯಮಂತ್ರಿ ನಿವಾಸಕ್ಕೆ ತೆರಳುತ್ತಾನೆ ಎಂದು ನನಗೆ ತಿಳಿದಿರಲಿಲ್ಲ ಎಂದು ಆರೋಪಿಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ಬೀದಿ ನಾಯಿಗಳ ಕುರಿತು ನ್ಯಾಯಾಲಯದ ಆದೇಶ ಪ್ರಕಟವಾದ ನಂತರ ಆತ ದಿಲ್ಲಿಗೆ ಪ್ರಯಾಣ ಬೆಳೆಸಿದ್ದ. ಆತ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದೂ ಅವರು ಹೇಳಿದ್ದಾರೆ. ಆತ ಪ್ರಾಣಿಗಳನ್ನು ಪ್ರೀತಿಸುತ್ತಾನೆ ಎಂದು ತಿಳಿಸಿದ್ದಾರೆ. ಈ ಹಿಂದೆ ಕೂಡಾ ಆತ ದಿಲ್ಲಿಗೆ ಪ್ರಯಾಣ ಬೆಳೆಸಿದ್ದ ಎಂದು ಅವರು ಹೇಳಿದ್ದಾರೆ.
ಆತ ನಮ್ಮ ವಶದಲ್ಲಿದ್ದಾನೆ ಎಂದು ದೃಢಪಡಿಸಿರುವ ಪೊಲೀಸರು, ಆತನ ಉದ್ದೇಶವನ್ನು ಅರಿಯಲು ವಿಸ್ತೃತ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ. ಆರೋಪಿ ನೀಡಿರುವ ಹೆಸರು ಹಾಗೂ ವಿಳಾಸವನ್ನು ಪರಿಶೀಲಿಸುವಂತೆಯೂ ದಿಲ್ಲಿ ಪೊಲೀಸರು, ಗುಜರಾತ್ ಪೊಲೀಸರನ್ನು ಸಂಪರ್ಕಿಸಿದ್ದಾರೆ.