ಚೀನಾದಿಂದ ಹಣ, 2019ರ ಚುನಾವಣೆಯನ್ನು ಬಡಮೇಲುಗೊಳಿಸಲು ಸಂಚು: ನ್ಯೂಸ್ ಕ್ಲಿಕ್ ವಿರುದ್ಧ ಪೋಲಿಸರ ಎಫ್ಐಆರ್ ನಲ್ಲಿ ಏನೇನಿದೆ?
ಹೊಸದಿಲ್ಲಿ : ಚೀನಿ ಸಂಸ್ಥೆಗಳೊಂದಿಗೆ ನಂಟಿನ ಆರೋಪದಲ್ಲಿ ತನಿಖೆಗೊಳಪಟ್ಟಿರುವ ಸುದ್ದಿ ಜಾಲತಾಣ ನ್ಯೂಸ್ ಕ್ಲಿಕ್ ಭಾರತದ ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದುರ್ಬಲಗೊಳಿಸುತ್ತಿದೆ ಎಂದು ದಿಲ್ಲಿ ಪೊಲೀಸರು ಆರೋಪಿಸಿದ್ದಾರೆ. ಪೋಲಿಸರು ದಾಖಲಿಸಿರುವ ಎಫ್ಐಆರ್ ಪ್ರಕಾರ ಚೀನಾದಿಂದ ಬೃಹತ್ ಮೊತ್ತದ ಹಣ ಬಂದಿತ್ತು ಮತ್ತು ಪಾವತಿ ಸುದ್ದಿಗಳನ್ನು ಉದ್ದೇಶಪೂರ್ವಕವಾಗಿ ಪ್ರಚಾರ ಮಾಡಲಾಗುತ್ತಿತ್ತು.
ಎಫ್ ಐ ಆರ್ ನಲ್ಲಿ ನ್ಯೂಸ್ ಕ್ಲಿಕ್, ಅದರ ಸ್ಥಾಪಕ ಪ್ರಬೀರ ಪುರಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ, ಜೊತೆಗೆ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ಹೆಸರಿಸಲಾಗಿದೆ ಮತ್ತು ಭಾರತದ ವಿರುದ್ಧ ಅಸಂತೋಷವನ್ನುಂಟು ಮಾಡಲು ಹಾಗೂ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಗೆ ಅಪಾಯವೊಡ್ಡಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಪುರಕಾಯಸ್ಥ ಮತ್ತು ಚಕ್ರವರ್ತಿ ಅವರನ್ನು ಬಂಧಿಸಲಾಗಿದೆ.
ಭಾರತದ ಸಾರ್ವಭೌಮತೆಗೆ ಅಡ್ಡಿಯನ್ನುಂಟು ಮಾಡಲು ಮತ್ತು ಭಾರತದ ವಿರುದ್ಧ ಅಸಂತೋಷವನ್ನು ಹುಟ್ಟುಹಾಕಲು ಸಂಚಿನ ಮುಂದುವರಿದ ಭಾಗವಾಗಿ ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಹಣವನ್ನು ಬಳಸು ಮಾರ್ಗದಿಂದ ಮತ್ತು ರಹಸ್ಯವಾಗಿ ರವಾನಿಸಲಾಗಿತ್ತು. ದೇಶಿಯ ನೀತಿಗಳು ಮತ್ತು ಭಾರತದ ಅಭಿವೃದ್ಧಿ ಯೋಜನೆಗಳನ್ನು ಟೀಕಿಸುವ ಹಾಗೂ ಚೀನಿ ಸರಕಾರದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಉತ್ತೇಜಿಸುವ, ಪ್ರವರ್ತಿಸುವ ಮತ್ತು ಸಮರ್ಥಿಸುವ ಪಾವತಿ ಸುದ್ದಿಗಳನ್ನು ಉದ್ದೇಶಪೂರ್ವಕವಾಗಿ ಪ್ರಚಾರ ಮಾಡಲಾಗುತ್ತಿತ್ತು ಎಂದು ಎಫ್ ಐ ಆರ್ ನಲ್ಲಿ ಹೇಳಲಾಗಿದೆ.
ಚೀನಿ ಸರಕಾರದ ಮಾಧ್ಯಮ ಯಂತ್ರದೊಂದಿಗೆ ನಿಕಟ ಸಂಬಂಧಗಳನ್ನು ಹೊಂದಿದ್ದಾರೆ ಎಂದು ನಂಬಲಾಗಿರುವ ಅಮೆರಿಕದ ಬಿಲಿಯಾಧೀಶ ನೆವಿಲ್ಲೆ ಸಿಂಘಂ ಅವರಿಂದ ಕಪಟ ಮಾರ್ಗದಿಂದ ವಿದೇಶಿ ನಿಧಿಗಳನ್ನು ಹರಿಸಲಾಗಿತ್ತು ಎಂದು ಎಫ್ಐಆರ್ ಪ್ರತಿಪಾದಿಸಿದೆ.
ಎಫ್ಐಆರ್ ಪ್ರಕಾರ ಚೀನಾದ ಬೃಹತ್ ಟೆಲಿಕಾಂ ಉದ್ಯಮಿಗಳೂ ಭಾರತದಲ್ಲಿ ಸಾವಿರಾರು ಮುಖವಾಡ ಕಂಪನಿಗಳನ್ನು ಹುಟ್ಟುಹಾಕಿದ್ದಾರೆ.
2019ರ ಲೋಕಸಭಾ ಚುನಾವಣೆಯ ಪ್ರಕ್ರಿಯೆಗಳನ್ನು ಹಾಳುಗೆಡವಲು ಪುರಕಾಯಸ್ಥ ಪೀಪಲ್ಸ್ ಅಲೈಯನ್ಸ್ ಫಾರ್ ಡೆಮಾಕ್ರಸಿ ಆ್ಯಂಡ್ ಸೆಕ್ಯುಲರಿಸಂ (ಪಿಎಡಿಎಸ್) ಗುಂಪಿನ ಜೊತೆಗೆ ಸಂಚು ರೂಪಿಸಿದ್ದರು ಎಂದೂ ದಿಲ್ಲಿ ಪೊಲೀಸರು ಹೇಳಿದ್ದಾರೆ.