×
Ad

ದಿಲ್ಲಿ ವಿವಿ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ತಿರುವು; ಕಥೆ ಕಟ್ಟಿದ ತಂದೆಯ ಬಂಧನ

Update: 2025-10-28 15:27 IST

Photo credit: NDTV

ಹೊಸದಿಲ್ಲಿ : ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಆ್ಯಸಿಡ್ ದಾಳಿ ನಡೆದಿದೆ ಎಂದು ಆರೋಪಿಸಿದ್ದಳು. ಇದೀಗ ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರು ʼಸುಳ್ಳು ಕಥೆ ಕಟ್ಟಿದʼ ಆರೋಪದಲ್ಲಿ ಆಕೆಯ ತಂದೆಯನ್ನೇ ಬಂಧಿಸಿದ್ದಾರೆ ಎಂದು ʼದಿ ಇಂಡಿಯನ್ ಎಕ್ಸ್‌ಪ್ರೆಸ್‌ʼ ವರದಿ ಮಾಡಿದೆ.

ತನಿಖೆ ವೇಳೆ, 20 ವರ್ಷದ ಮಗಳು ತನ್ನ ಕೈಗಳ ಮೇಲೆ ಟಾಯ್ಲೆಟ್ ಕ್ಲೀನರ್ ಸುರಿದು ಸುಳ್ಳು ಕಥೆಯನ್ನು ಸೃಷ್ಟಿಸಿದ್ದಾಳೆ ಎಂದು ಆರೋಪಿ ತಂದೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ರವಿವಾರ ದಿಲ್ಲಿಯ ಲಕ್ಷ್ಮಿಬಾಯಿ ಕಾಲೇಜಿನ ಹೊರಗೆ ಯುವತಿಯ ಮೇಲೆ ಆ್ಯಸಿಡ್ ಎರಚಲಾಗಿದೆ ಎಂದು ವರದಿಯಾಗಿತ್ತು. ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ಆ್ಯಸಿಡ್ ಎಸೆದು ಪರಾರಿಯಾಗಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಳು.

ಆರೋಪಿಗಳಲ್ಲಿ ಓರ್ವ ಮುಕುಂದ್‌ಪುರದ ನಿವಾಸಿ ಮತ್ತು ಮತ್ತಿಬ್ಬರನ್ನು ಇಶಾನ್ ಮತ್ತು ಅರ್ಮಾನ್ ಎಂದು ಹೇಳಿಕೊಂಡಿದ್ದಳು. ತನಿಖೆಯ ವೇಳೆ ಪೊಲೀಸರು ವಿದ್ಯಾರ್ಥಿನಿಯ ಹೇಳಿಕೆಯಲ್ಲಿ ಗೊಂದಲವಿರುವುದನ್ನು ಗಮನಿಸಿದರು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಪ್ರಮುಖ ವ್ಯಕ್ತಿ ಮತ್ತು ಆತನ ಬೈಕ್ ಕೃತ್ಯ ನಡೆದಿದೆ ಎಂದು ಹೇಳಿದ ಸಮಯದಲ್ಲಿ ಬೇರೆ ಕಡೆ ಇರುವುದು ಕಂಡು ಬಂದಿತ್ತು. ಕರೆ ವಿವರಗಳು, ಸಿಸಿಟಿವಿ ದೃಶ್ಯಗಳು, ಸಾಕ್ಷಿಗಳ ಹೇಳಿಕೆಗಳಿಂದ ಇದು ದೃಢಪಟ್ಟಿದೆ ಎಂದು ವಿಶೇಷ ಪೊಲೀಸ್ ಆಯುಕ್ತ ರವೀಂದರ್ ಯಾದವ್ ತಿಳಿಸಿದ್ದಾರೆ.

ಈ ಕುರಿತು ಹೆಚ್ಚಿನ ತನಿಖೆ ನಡೆಸಿದ ವೇಳೆ ವಿದ್ಯಾರ್ಥಿನಿಯ ತಂದೆಯ ಮೇಲೆ ಪ್ರಮುಖ ಆರೋಪಿಯ ಪತ್ನಿ ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್‌ ಆರೋಪ ಹೊರಿಸಿರುವುದು ಬಹಿರಂಗವಾಗಿದೆ. ಇದೇ ಕಾರಣಕ್ಕೆ ನಕಲಿ ಆ್ಯಸಿಡ್ ದಾಳಿ ಕಥೆಯನ್ನು ಕಟ್ಟಿರುವುದು ಬಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News