ಡಿಜಿಟಲ್ ಅರೆಸ್ಟ್: ಸೈಬರ್ ವಂಚಕರಿಂದ ಉದ್ಯಮಿಗೆ 58 ಕೋಟಿ ರೂ. ವಂಚನೆ
PC : freepik.com
ಮುಂಬೈ,ಅ.16: ‘ಡಿಜಿಟಲ್ ಅರೆಸ್ಟ್’ನ ಹೊಸ ಪ್ರಕರಣವೊಂದಲ್ಲಿ ಸೈಬರ್ ವಂಚಕರು ಜಾರಿ ನಿರ್ದೇಶನಾಲಯ(ಈಡಿ) ಹಾಗೂ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಸಿಬ್ಬಂದಿ ಎಂಬ ಸೋಗಿನಲ್ಲಿ ಮುಂಬೈನ ಉದ್ಯಮಿಯೊಬ್ಬರಿಂದ 58 ಕೋಟಿ ರೂ.ದೋಚಿರುವುದು ಬೆಳಕಿಗೆ ಬಂದಿದೆ.
ಆಗಸ್ಟ್ 19 ಹಾಗೂ ಆಕ್ಟೋಬರ್ 8ರ ನಡುವೆ ಸೈಬರ್ ವಂಚಕರು ತಾವು ಈಡಿ ಹಾಗೂ ಸಿಬಿಐ ಸಿಬ್ಬಂದಿಯೆಂದು ಹೇಳಿಕೊಂಡು, ಉದ್ಯಮಿಯನ್ನು ಸಂಪರ್ಕಿಸಿದ್ದರು. ಕಪ್ಪುಹಣ ಬಿಳುಪುಗೊಳಿಸಿದ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದಾರೆಂದು ಹೆದರಿಸಿದ್ದರು.
ಉದ್ಯಮಿಗೆ ವೀಡಿಯೊ ಕರೆ ಮಾಡಿದ ವಂಚಕರು, ಆತನನ್ನು ಹಾಗೂ ಆತನ ಪತ್ನಿಯನ್ನು ‘ಡಿಜಿಟಲ್ ಬಂಧನಕ್ಕೆ’ ಒಳಪಡಿಸಿರುವುದಾಗಿ ತಿಳಿಸಿದರು. ತಾವು ಸೂಚಿಸಿದ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಠೇವಣಿಯಿಡುವಂತೆ ವಂಚಕರು ಉದ್ಯಮಿಗೆ ಸೂಚಿಸಿದರು.
ಅದರಂತೆ ಅಮಾಯಕ ಉದ್ಯಮಿಯು ಎರಡು ತಿಂಗಳುಗಳ ಅವಧಿಯಲ್ಲಿ ಆರ್‌ಟಿಜಿಎಸ್ ಮೂಲಕ 58 ಕೋಟಿ ರೂ.ಗಳನ್ನು ಖಾತೆಗಳಿಗೆ ವರ್ಗಾಯಿಸಿದ್ದರು. ಆನಂತರ ಅವರಿಗೆ ತಾನು ವಂಚನೆಗೊಳಗಾಗಿರುವುದು ಅರಿವಾಗಿ, ಸೈಬರ್ ಪೊಲೀಸರಿಗೆ ದೂರು ನೀಡಿದ್ದರು.
ಮುಂಬೈನ ಸೈಬರ್ ಪೊಲೀಸರು ಭಾರತೀಯ ನ್ಯಾಯಸಂಹಿತೆಯ ಸೂಕ್ತ ಕಾನೂನುಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಸುಮಾರು 18 ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅವರು ಕೂಡಲೇ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ, ವಿವಿಧ ಬ್ಯಾಂಕ್‌ಖಾತೆಗಳಿಗೆ ವರ್ಗಾವಣೆಯಾದ ಹಣವನ್ನು ಮುಟ್ಟುಗೋಲು ಹಾಕುವಂತೆ ಸೂಚಿಸಿದರು.
ಪ್ರಕರಣದ ತನಿಖೆ ನಡೆಸುತ್ತಿರುವ ಮೂವರನ್ನು ಬಂಧಿಸಿದ್ದಾರೆಂದು ಮಹಾರಾಷ್ಟ್ರ ಸೈಬರ್ ದಳವು ತಿಳಿಸಿದೆ.